ಬೆಂಗಳೂರು: ರಾಜ್ಯದ ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಅನಾವಶ್ಯಕವಾಗಿ ಕಸಿದುಕೊಳ್ಳುವಂತಹ ಪ್ರಕ್ರಿಯೆ ನಡೆದರೆ, ಅಂತಹ ಸಂದರ್ಭಗಳಲ್ಲಿ ಮತದಾರರ ಹಕ್ಕು ರಕ್ಷಿಸಲು ಸರ್ಕಾರ ಸರ್ವಪ್ರಯತ್ನ ನಡೆಸಲಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ನಡೆದ ಚರ್ಚೆಗಳ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ.
ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದ ಸುಮಾರು 27 ಲಕ್ಷ ಜನರ ಮತದಾನದ ಹಕ್ಕು ಕಸಿಯಲಾಗಿದೆ ಎಂಬ ಆರೋಪಗಳ ಹಿನ್ನೆಲೆ, ಅದರ ಅವಘಡಗಳು ಮತ್ತು ಗಂಭೀರ ಆಕ್ಷೇಪಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.
ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ಸಹ ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಅಂತಿಮ ಮತದಾರರ ಪಟ್ಟಿ, ಎಸ್‌ಐಆರ್ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಅದರ ಜಾರಿಗೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಇನ್ನಷ್ಟು ವಿವರವಾದ ಚರ್ಚೆಗಳು ನಡೆಯಬೇಕಿದ್ದು, ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.



























































