ಬೆಂಗಳೂರು: ಸಿದ್ದರಾಮಯ್ಯ ನೇತೇತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಅಧಿವೇಶನದಲ್ಲಿ ಕಳಚಿ ಹಾಕುವಲ್ಲಿ ಯಶಸ್ವಿಯಾಗಿರುವುದಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಅಧಿಕಾರಕ್ಕೆ ಬಂದ ದಿನದಿಂದ ಹಗರಣಗಳ ಸುಳಿಯಲ್ಲೇ ಸರ್ಕಾರ ಸಿಕ್ಕಿಕೊಂಡಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ ಆರು ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಲೂಟಿ ಹಗರಣಗಳ ಪಟ್ಟಿಗೆ ಹೊಸ ಸೇರ್ಪಡೆ ಎಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಗುರುವಾರ ಆರೋಪಿಸಿದ್ದಾರೆ.
ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಜತೆಗೆ ಖಜಾನೆ ಖಾಲಿಯಾಗಿದೆ. ತಮ್ಮ ಪಾಲಿನ ಶೇಕಡಾ 40 ಹಣ ಭರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು” ಎಂಬಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ವಿಬಿ ಜಿ – ರಾಮ್ ಜಿ” ಕಾಯ್ದೆ ವಿರುದ್ಧ ತಕರಾರು ತೆಗೆದಿದ್ದಾರೆ ಎಂದು ಟೀಕಿಸಿದರು.
ಈ ವಾಸ್ತವ ಸಂಗತಿ ಮರೆ ಮಾಚಿ, ಇಲ್ಲಸಲ್ಲದ ಆರೋಪ ಮಾಡಿ ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಪಂಚಾಯಿತಿ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕೋಟ್ಯಂತರ ರೂ. ವೆಚ್ಚ ಮಾಡಿ ಮಾಧ್ಯಮಗಳಿಗೆ ಜಾಹಿರಾತು ಬಿಡುಗಡೆ ಮಾಡಲಾಗಿದೆ. ಹಣದ ಕೊರತೆ ಎದುರಿಸುತ್ತಿದ್ದರೂ ಜನರ ತೆರಿಗೆ ಹಣವನ್ನು ಈ ರೀತಿ ರಾಜಕೀಯ ತೆವಲುಗಳಿಗೆ ಪೋಲು ಮಾಡಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಮನರೇಗಾ ಯೋಜನೆಯನ್ನು ತೋಚಿದಂತೆ ಬಳಕೆ ಮಾಡಿ ಕೋಟಿಗಟ್ಟಲೇ ಹಣ ಲೂಟಿ ಮಾಡುತ್ತಿದ್ದರು. ಹೊಸ ಕಾಯ್ದೆ ಅದಕ್ಕೆಲ್ಲಾ ತೆರೆ ಎಳೆದಿದೆ. ಈಗ ಆಧುನಿಕತೆ ಸ್ಪರ್ಶದ ಜತೆ ಕಟ್ಟುನಿಟ್ಟಿನ ಹೊಸ ಕಾನೂನು ರೂಪಿಸಿದೆ. ಮಹತ್ಮಾ ಗಾಂಧಿ ಅವರ ಆಶಯದಂತೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳೊಂದಿಗೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ತಮ್ಮ ಲೂಟಿಗೆ ಅವಕಾಶ ತಪ್ಪಿ ಹೋಯಿತು ಮತ್ತು ಶೇಕಡಾ 40 ರಷ್ಟು ಹಣ ಭರಿಸಬೇಕು ಎಂಬ ಸಂಕಟದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ಹಗರಣಗಳೇ ಈ ಸರ್ಕಾರದ ಸಾಧನೆ. ಹೀಗಾಗಿ ರಾಜ್ಯಪಾಲರ ಜತೆ ಕಾಲು ಕೆರೆದು ಜಗಳ ಮಾಡುವುದು, ಕೇಂದ್ರದ ವಿರುದ್ಧ ನಿರ್ಣಯ ಮಂಡಿಸುವ ನೆಪದಲ್ಲಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಷಡ್ಯಂತ್ರ ರೂಪಿಸಲಾಗಿತ್ತು. ಆದರೆ ಆ ಹುನ್ನಾರಗಳಿಗೆ ಅವಕಾಶ ನೀಡದೆ ಜನತೆಗೆ ವಾಸ್ತವ ಸಂಗತಿಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸದನದೊಳಗೆ ಬಿಜೆಪಿ ಹೋರಾಟ ಯಶಸ್ವಿಯಾಗಿದೆ ಎಂದರು.
ಅಬಕಾರಿ ಇಲಾಖೆಯಲ್ಲಿ ನಡೆದಿರುವ ಆರು ಸಾವಿರ ಕೋಟಿಗೂ ಅಧಿಕ ಮೊತ್ತದ ಹಗರಣವನ್ನು ಅಧಿವೇಶನದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಸಚಿವ ತಿಮ್ಮಾಪುರ ರಾಜೀನಾಮೆ ಮತ್ತು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿದ್ದೆವು. ಆದರೆ ಹೈಕಮಾಂಡ್ ಹಾಗೂ ಸಿಎಂ ಆದಿಯಾಗಿ ಎಲ್ಲರೂ ಸೇರಿಕೊಂಡು ಲೂಟಿ ಮಾಡಿರುವುದರಿಂದ ಕಳಂಕಿತ ಸಚಿವರ ಬೆಂಬಲಕ್ಕೆ ಇಡೀ ಸಚಿವ ಸಂಪುಟವೇ ನಿಂತುಕೊಂಡಿತ್ತು. ಇದು ರಾಜ್ಯದ ಇತಿಹಾಸದಲ್ಲಿ ಹಿಂದೆ ಎಂದೆಂದೂ ನಡೆದಿರಲಿಲ್ಲ. ಇಲ್ಲಿ ಲೂಟಿ ಮಾಡಿದ ಹಣವನ್ನು ನೆರೆ ರಾಜ್ಯಗಳ ಚುನಾವಣೆಗಳಿಗೆ ಬಳಕೆ ಮಾಡುತ್ತಿರುವುದು ಸ್ಪಷ್ಟ ಎಂದರು.
ಆರೋಪಕ್ಕೆ ಒಂದು ಆಧಾರ ನೀಡಿದರೂ ರಾಜೀನಾಮೆ ನೀಡುವುದಾಗಿ ಸಚಿವ ತಿಮ್ಮಾಪುರ ಹೇಳಿದ್ದರು. ಒಂದಲ್ಲಾ, ಎರಡಲ್ಲಾ ಐದಕ್ಕೂ ಹೆಚ್ಚು ಸಾಕ್ಷ್ಯ ನೀಡಲಾಯಿತು. ಲಂಚ ಸ್ವೀಕಾರಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಮೂರು ಆಡಿಯೋ ಸಂಭಾಷಣೆ, ಎರಡು ಲೋಕಾಯುಕ್ತ ದೂರು, ರಾಜ್ಯಪಾಲರಿಗೆ ನೀಡಿದ್ದ ಒಂದು ದೂರು, ಲೋಕಾಯುಕ್ತರಿಗೆ ಸಿಕ್ಕಿಬಿದ್ದಿರುವ ನಿಂಗಪ್ಪ ಎಂಬಾತ ನೀಡಿದ್ದ ಸ್ವ ಇಚ್ಚಾ ಹೇಳಿಕೆಯಂತಹ ಗಂಭೀರ ಸಾಕ್ಷ್ಯ ನೀಡಿ ಮನವರಿಕೆ ಮಾಡಿಕೊಡಲಾಯಿತು. ಸಂವೇದನೆ ಇಲ್ಲದ ಈ ಸರ್ಕಾರ ಯಾವುದಕ್ಕೂ ಮಣಿಯಲಿಲ್ಲ ಎಂದು ಲೇವಡಿ ಮಾಡಿದರು.
ಅಧಿವೇಶನದಲ್ಲಿ ಆರಂಭಿಸಿರುವ ಈ ಹೋರಾಟ ನಿಲ್ಲುವುದಿಲ್ಲ. ಪಕ್ಷದ ವತಿಯಿಂದ ರಾಜ್ಯವ್ಯಾಪಿ ಹೋರಾಟಕ್ಕೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ “ಜನತಾ ನ್ಯಾಯಾಲಯ”ದ ಮುಂದೆ ಹಗರಣವನ್ನು ಕೊಂಡೊಯ್ಯಲಾಗುವುದು. ಕಾನೂನು ಹೋರಾಟ ನಡೆಸುವ ಬಗ್ಗೆಯೂ ಆಲೋಚನೆ ನಡೆಸಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಪ್ರಮುಖ ಸಾಕ್ಷ್ಯಗಳು ಸಿಗುವ ಸೂಚನೆಗಳಿವೆ. ಅವುಗಳ ಸಮೇತ ಸಾರ್ವಜನಿಕರ ಮುಂದೆ ಈ ಸರ್ಕಾರದ ಬಣ್ಣ ಬಯಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.























































