ಮುಂಬೈ: ಬಾಲಿವುಡ್‌ನ ಶಕ್ತಿ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ದೀಪಾವಳಿಯಲ್ಲಿ ತಮ್ಮ ಮಗಳು ದುವಾ ಮುಖವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ತೋರಿಸಿ ಅಭಿಮಾನಿಗಳಿಗೆ ಸಂತೋಷದ ಸರ್ಪ್ರೈಸ್ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕುಟುಂಬದ ಹೃದಯಸ್ಪರ್ಶಿ ಚಿತ್ರ ಈಗ ವೈರಲ್ ಆಗಿದೆ. ದೀಪಿಕಾ ಹಿಂದಿಯಲ್ಲಿ “ದೀಪಾವಳಿ ಕಿ ಹಾರ್ದಿಕ್ ಶುಭಕಾಮ್ನಯೇನ್” ಎಂದು ಬರೆದು ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದ್ದಾರೆ.
ಫೋಟೋಗಳಲ್ಲಿ ದಂಪತಿಗಳು ಸಂಪ್ರದಾಯಬದ್ಧ ಹಬ್ಬದ ಉಡುಪಿನಲ್ಲಿ ಕಂಗೊಳಿಸುತ್ತಿದ್ದಾರೆ. ದೀಪಿಕಾ ಕೆಂಪು ರೇಷ್ಮೆ ಸಲ್ವಾರ್‌ಕಮೀಜ್‌ನಲ್ಲಿ, ಭಾರವಾದ ಚಿನ್ನಾಭರಣಗಳೊಂದಿಗೆ ಮಲ್ಲಿಗೆಯ ಹೂವಿನ ಜಡೆಗೆ ಅಲಂಕಾರ ನೀಡಿದ್ದರೆ, ರಣವೀರ್ ಹಾಲುಬಣ್ಣದ ಶೆರ್ವಾನಿ, ಮುತ್ತಿನ ಹಾರ ಮತ್ತು ಕಪ್ಪು ಕಣ್ಣಕಗಳಿಂದ ತಮ್ಮ ವಿಶಿಷ್ಟ ಶೈಲಿಯಲ್ಲಿ ಮಿಂಚಿದ್ದಾರೆ.
ಹೊಂದಾಣಿಕೆಯ ಕೆಂಪು ಉಡುಪಿನಲ್ಲಿದ್ದ ಪುಟ್ಟ ದುವಾ, ತಂದೆ–ತಾಯಿಯ ತೋಳಿನಲ್ಲಿ ಮುದ್ದಾಗಿ ಕಾಣುತ್ತಿದ್ದಾಳೆ. ಅವಳ ಪುಟ್ಟ ಪೋನಿಟೇಲ್‌ಗಳು ಚಿತ್ರವನ್ನು ಇನ್ನಷ್ಟು ಮುದ್ದಾಗಿಸಿವೆ. ಮತ್ತೊಂದು ಚಿತ್ರದಲ್ಲಿ ದೀಪಿಕಾ ದೀಪಾವಳಿ ಪೂಜೆಯ ವೇಳೆ ದುವಾವನ್ನು ಮಮತೆಯಿಂದ ಅಪ್ಪಿಕೊಂಡಿರುವುದು ಸೆರೆಹಿಡಿಯಲಾಗಿದೆ.
2013ರಲ್ಲಿ ‘ಗೋಲಿಯೋಂ ಕಿ ರಾಸಲೀಲಾ: ರಾಮ್ ಲೀಲಾ’ ಚಿತ್ರದ ಚಿತ್ರೀಕರಣ ವೇಳೆ ಪರಿಚಯವಾದ ಈ ಜೋಡಿ, ಆರು ವರ್ಷಗಳ ಪ್ರೇಮದ ನಂತರ 2018ರ ನವೆಂಬರ್‌ನಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ಸಿಂಧಿ ಮತ್ತು ಕೊಂಕಣಿ ಸಂಪ್ರದಾಯದಂತೆ ವಿವಾಹವಾದರು.
ಸೆಪ್ಟೆಂಬರ್ 2024ರಲ್ಲಿ ಜನಿಸಿದ ದುವಾ, ದಂಪತಿಯ ಜೀವನದ ಹೊಸ ಅಧ್ಯಾಯವಾಗಿದೆ. ಇದುವರೆಗೆ ದಂಪತಿಗಳು ಅವಳ ಗೌಪ್ಯತೆಯನ್ನು ಕಾಪಾಡುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಅವಳ ಮುಖವನ್ನು ಬಹಿರಂಗಪಡಿಸಿರಲಿಲ್ಲ.
ಕೆಲ ವಾರಗಳ ಹಿಂದಷ್ಟೇ ವಿಮಾನ ನಿಲ್ದಾಣದಲ್ಲಿ ದೀಪಿಕಾ ಹಾಗೂ ದುವಾ ಬಗ್ಗಿಯಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಅಲ್ಲಿ ದೀಪಿಕಾ ಅಭಿಮಾನಿಗಳಿಗೆ “ಮಗುವಿನ ಚಿತ್ರ ತೆಗೆಬೇಡಿ” ಎಂದು ವಿನಮ್ರ ವಿನಂತಿ ಮಾಡಿದ್ದರೂ, ದೃಶ್ಯ ನೆಟ್ಟಿಗರ ಗಮನಕ್ಕೆ ಬಂದಿತ್ತು.
ಈಗ ದೀಪಾವಳಿಯ ಸಂದರ್ಭದಲ್ಲಿ ಕುಟುಂಬದ ಫೋಟೊಗಳ ಮೂಲಕ ದಂಪತಿಗಳು ತಮ್ಮ ಖಾಸಗಿ ಜೀವನದ ಮುದ್ದಾದ ನೋಟವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.