ಕಾಬುಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಕದನ ವಿರಾಮವನ್ನು ಉಲ್ಲಂಘಿಸಿದ ಪಾಕಿಸ್ತಾನ, ಅಫ್ಘಾನಿಸ್ತಾನದ ನೆಲದಲ್ಲಿ ವೈಮಾನಿಕ ದಾಳಿ ನಡೆಸಿ ಕ್ರೌರ್ಯ ಪ್ರದರ್ಶಿಸಿದೆ.
ಪಾಕಿಸ್ತಾನ ನಡೆಸಿದ ಈ ದಾಳಿಯಲ್ಲಿ 10 ಮಂದಿ ನಾಗರಿಕರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಪಾಕಿಸ್ತಾನವು ಪಕ್ಟಿಕಾ ಪ್ರಾಂತ್ಯದ ಮೂರು ಭಾಗಗಳಲ್ಲಿ ಬಾಂಬ್ ದಾಳಿ ನಡೆಸಿದ್ದು, ಇದು ಎರಡೂ ದೇಶಗಳ ನಡುವಿನ ಶಾಂತಿ ಪ್ರಯತ್ನಗಳಿಗೆ ದೊಡ್ಡ ಹೊಡೆತ ನೀಡಿದೆ.
ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, “ಪಾಕಿಸ್ತಾನ ಕದನ ವಿರಾಮವನ್ನು ಮುರಿದಿದೆ; ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದೆ.
ಎರಡು ರಾಷ್ಟ್ರಗಳ ಗಡಿಭಾಗದಲ್ಲಿ ಕಳೆದ ಕೆಲವು ವಾರಗಳಿಂದಲೂ ಉದ್ವಿಗ್ನತೆ ವಾತಾವರಣ ಮುಂದುವರಿದಿದೆ.