ಬೆಂಗಳೂರು: ಜಾತಿ ಸಮೀಕ್ಷೆ ವಿಚಾರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ಬಿಜೆಪಿ ನಾಯಕರು ಜಾತಿ ಗಣತಿಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಜಾತಿಗಣತಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರ್ಕಾರದ ಕಾರ್ಯಕ್ರಮ ಬಗ್ಗೆ ಕಾಟು ಟೀಕೆ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ಮೇಲೆ ನನಗೆ ನಂಬಿಕೆಯಿಲ್ಲ, ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಹಾಗಾಗಿ, ಜಾತಿಗಣತಿ ಬಹಿಷ್ಕರಿಸಿ ಎಂದು ಜನತೆಗೆ ಕರೆ ನೀಡಿದರು.
ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ ಎಂದಿರುವ ತೇಜಸ್ವಿ ಸೂರ್ಯ, ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ ಜೊತೆಗೆ, ಜಾತಿ ಜಾತಿ ಮಧ್ಯೆ ಗಲಾಟೆ ತರಲು ಇದನ್ನು ಮಾಡುತ್ತಿದ್ದಾರೆ. ಹಾಗಾಗಿ ಇದರಲ್ಲಿ ಪಾಲ್ಗೊಳ್ಳಬೇಡಿ ಎಂದು ಕರೆ ನೀಡಿದ್ದಾರೆ.
ಹಿಂದೆ ಲಾಲು ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರಂತಹ ನಾಯಕರು ಮಾಡಿದ ತಂತ್ರಗಳಂತೆಯೇ ಇಲ್ಲಿಯೂ ಬಳಕೆ ಮಾಡಲಾಗುತ್ತಿದ್ದು, ಈ ಜಾತಿ ಗಣತಿಯು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ ಅವರು, ಈ ಬಾರಿಯ ಜಾತಿ ಗಣತಿಯಲ್ಲಿ ಭಾಗವಹಿಸುವಿಕೆಯು ಸ್ವಯಂಪ್ರೇರಿತವಾಗಿದೆ, ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ ಎಂದು ಗಮನಸೆಳೆದಿದ್ದಾರೆ.