ಉತ್ತರ ಭಾರತದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದ ‘ಐ ಲವ್ ಮುಹಮ್ಮದ್’ ವಿವಾದ ಕರ್ನಾಟಕ ಪೊಲೀಸರಿಗೂ ಸವಾಲೆಂಬಂತಿದೆ. ಈ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ದಾವಣಗೆರೆಯಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿನ ‘ಐ ಲವ್ ಮುಹಮ್ಮದ್’ ವಿವಾದ ಮತ್ತು ಸಂಬಂಧಿತ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಎಂಟು ಜನರನ್ನು ಬಂಧಿಸಿದ್ದಾರೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಹೆಚ್ಚಿನ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸೆಪ್ಟೆಂಬರ್ 24 ರಂದು ದಾವಣಗೆರೆ ನಗರದ ಕಾರ್ಲ್ ಮಾರ್ಕ್ಸ್ ನಗರ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಘಟನೆಯ ಸಂದರ್ಭದಲ್ಲಿ, ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ, ಸುಮಾರು 100 ಜನರ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದು, ಎರಡೂ ಕಡೆಯ ಎಂಟು ಜನರನ್ನು ಬಂಧಿಸಲಾಗಿದೆ.
ಜೊತೆಗೆ ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೇಲೂ ನಿಗಾ ಇಡಲಾಗಿದೆ ಎಂದಿರುವ ದಾವಣಗೆರೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಯಾವುದೇ ಘಟನೆಗಳು ಸಂಭವಿಸಿದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಬದಲು ಪೊಲೀಸರನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದಾವಣಗೆರೆ ನಗರದಲ್ಲಿ ‘ಐ ಲವ್ ಮುಹಮ್ಮದ್’ ಬ್ಯಾನರ್‌ಗಳು ಕಾಣಿಸಿಕೊಂಡ ನಂತರ ಉದ್ವಿಗ್ನತೆ ಉಂಟಾಯಿತು. ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ, ಎರಡು ಸಮುದಾಯಗಳ ನಡುವೆ ವಾಗ್ವಾದ ನಡೆದು, ಅದು ಘರ್ಷಣೆಯ ಹಂತಕ್ಕೆ ತಲುಪಿತು. ಪೊಲೀಸರ ಮಧ್ಯಪ್ರವೇಶದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು ಮತ್ತು ಎರಡೂ ಸಮುದಾಯಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ.