ನವದೆಹಲಿ: ಭಯೋತ್ಪಾದನೆ ಧರ್ಮ, ಜಾತಿ ಅಥವಾ ಬಣ್ಣಕ್ಕೆ ಸಂಬಂಧಪಟ್ಟದ್ದು ಅಲ್ಲ, ಅದು ಶುದ್ಧ ಪೈಶಾಚಿಕತೆಯ ಒಂದು ರೂಪ ಎಂದು ಆರ್‌ಎಸ್‌ಎಸ್ ಹಿರಿಯ ನಾಯಕ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಮುಖ್ಯಸ್ಥ ಇಂದ್ರೇಶ್ ಕುಮಾರ್ ಹೇಳಿದ್ದಾರೆ. ರಾಜಧಾನಿಯ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಖಿಲ ಭಾರತ ಮುಸ್ಲಿಂ ಮಹಾಸಮ್ಮೇಳನದಲ್ಲಿ ಅವರು ಮಾತನಾಡಿದರು.
ದೇಶಾದ್ಯಂತದ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಇಂದ್ರೇಶ್ ಕುಮಾರ್, “ನಾವು ಇದ್ದೆವು, ಇದ್ದೇವೆ, ಇದ್ದೇ ಇರುತ್ತೇವೆ – ಹಿಂದೂಸ್ತಾನಿಯರೇ. ನಮ್ಮ ಗುರುತನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು. ದೇಶದ ನೈತಿಕತೆಯನ್ನು ರಕ್ಷಿಸಲು ಉಗ್ರವಾದ ಮತ್ತು ಮಾದಕವಸ್ತುಗಳನ್ನು ನಿರ್ಮೂಲನೆ ಮಾಡುವುದು ಅಗತ್ಯ ಎಂದು ಅವರು ಒತ್ತಾಯಿಸಿದರು.
ತ್ರಿವಳಿ ತಲಾಖ್ ರದ್ದತಿಯಲ್ಲಿ MRM ವಹಿಸಿದ್ದ ಪಾತ್ರವನ್ನು ನೆನಪಿಸಿಕೊಂಡ ಕುಮಾರ್, ಅದು ಮುಸ್ಲಿಂ ಮಹಿಳೆಯರಿಗೆ ಘನತೆ ನೀಡಿದ ಹಂತವಾಗಿತ್ತು ಎಂದರು. “ಭಾರತೀಯ ಮುಸ್ಲಿಮರು ನಿರ್ಲಿಪ್ತತೆಯನ್ನು ತಿರಸ್ಕರಿಸಿ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಬಿಹಾರ ಸೇರಿದಂತೆ ಹಲವೆಡೆ ರೋಹಿಂಗ್ಯಾ ಮತ್ತು ಅಕ್ರಮ ಒಳನುಸುಳುವವರ ಸಮಸ್ಯೆ ಗಂಭೀರವಾಗುತ್ತಿದೆ ಎಂದು ಎಚ್ಚರಿಸಿದ ಅವರು, “ಒಳನುಸುಳುವವರಿಗೆ ಉದ್ಯೋಗ ಸಿಕ್ಕರೆ ಭಾರತೀಯ ಮುಸ್ಲಿಮರು ತಮ್ಮ ಜೀವನೋಪಾಯವನ್ನು ಹೇಗೆ ಭದ್ರಪಡಿಸಿಕೊಳ್ಳುತ್ತಾರೆ?” ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ JPC ಅಧ್ಯಕ್ಷ ಜಗದಾಂಬಿಕಾ ಪಾಲ್, ಮಾಜಿ ಕೇಂದ್ರ ಸಚಿವ ಸತ್ಯನಾರಾಯಣ್ ಜತಿಯಾ, ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್‌ನ ಮೌಲಾನಾ ಉಮರ್ ಇಲ್ಯಾಸಿ, ಅಜ್ಮೀರ್ ದರ್ಗಾ ಅಧ್ಯಕ್ಷ ಖ್ವಾಜಾ ನಸ್ರುದ್ದೀನ್, NCMEI ಕಾರ್ಯಕಾರಿ ಅಧ್ಯಕ್ಷ ಶಾಹಿದ್ ಅಖ್ತರ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷೆ ಜಮಾಲ್ ಸಿದ್ದಿಕಿ ಮತ್ತು MRM ಮಹಿಳಾ ವಿಭಾಗದ ಸಂಚಾಲಕಿ ಶಾಲಿನಿ ಅಲಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
MRM ತನ್ನ 25 ವರ್ಷದ ಪ್ರಯಾಣದ ಈ ಸಮ್ಮೇಳನದಲ್ಲಿ ಮುಂದಿನ ಅವಧಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ವಿದ್ಯಾರ್ಥಿವೇತನ, ಮಹಿಳಾ ಸಬಲೀಕರಣ ಮತ್ತು ಸಮನ್ವಯ ಕೇಂದ್ರಗಳ ಕಾರ್ಯಕ್ರಮ ಘೋಷಿಸಲಾಯಿತು. “ಇನ್ನು ಮುಂದೆ ಮುಸ್ಲಿಂ ಮಹಿಳೆಯರು ಬದಲಾವಣೆಯ ಫಲಾನುಭವಿಗಳಷ್ಟೇ ಅಲ್ಲ, ನಾಯಕತ್ವ ವಹಿಸುವತ್ತ ಹೆಜ್ಜೆಯಿಡುತ್ತಾರೆ” ಎಂದು ಶಾಲಿನಿ ಅಲಿ ಘೋಷಿಸಿದರು.
“ಭಾರತ್ ಫಸ್ಟ್ – ಹಿಂದೂಸ್ತಾನ್ ಫಸ್ಟ್, ಹಿಂದೂಸ್ತಾನಿ ಬೆಸ್ಟ್” ಎಂಬ ಘೋಷಣೆಯಡಿ ಶಿಕ್ಷಣ, ಉದ್ಯೋಗ, ಮಹಿಳಾ ಸಬಲೀಕರಣ ಹಾಗೂ ರಾಷ್ಟ್ರೀಯ ಏಕತೆಯ ಪ್ರಯತ್ನಗಳನ್ನು ಗಟ್ಟಿಗೊಳಿಸುವ ನಿರ್ಧಾರವನ್ನು ಸಮ್ಮೇಳನ ಕೈಗೊಂಡಿತು.