ಮುಂಬೈ: ಸಿಎ ಕನಸನ್ನು ಬೆನ್ನಟ್ಟುತ್ತಿರುವ ವಿದ್ಯಾರ್ಥಿಗಳ ಕಠಿಣ ಬದುಕು, ಒತ್ತಡ, ತ್ಯಾಗಗಳನ್ನು ಬಿಂಬಿಸುವ ‘ಹಾಫ್ ಸಿಎ’ ವೆಬ್‌ಸಿರೀಸ್ ತನ್ನ ಎರಡನೇ ಸೀಸನ್ ಮೂಲಕ ಮತ್ತಷ್ಟು ತೀವ್ರ ಭಾವನಾತ್ಮಕ ಹಂತಕ್ಕೇರಲಿದೆ. ಗುರುವಾರ ಬಿಡುಗಡೆಯಾದ ಟ್ರೇಲರ್‌ನಲ್ಲಿ ಆರ್ಚೀ ಮತ್ತು ನೀರಜ್ ಅವರ ವೈಯಕ್ತಿಕ–ವೃತ್ತಿಪರ ಬದುಕಿನ ಹೋರಾಟ ನೈಜವಾಗಿ ಮೂಡಿಬಂದಿದೆ.
ಮೊದಲ ಸೀಸನ್ ಮುಕ್ತಾಯಗೊಂಡ ಸ್ಥಳದಿಂದಲೇ ಕಥೆ ಮುಂದುವರಿಯುತ್ತಿದ್ದು, ಪರೀಕ್ಷಾ ಒತ್ತಡ, ವೃತ್ತಿಪರ ಗಡುವು, ಆತ್ಮಸಂದೇಹ ಹಾಗೂ ದೈನಂದಿನ ಗೋಜಿಗೆ ತತ್ತರಿಸುತ್ತಿರುವ ವಿದ್ಯಾರ್ಥಿಗಳ ವಾಸ್ತವ ಚಿತ್ರಣ ನೀಡಲಾಗಿದೆ. “ಪ್ರತಿ ದಿನ ಕನಸನ್ನು ಬೆನ್ನಟ್ಟುವ ಹೋರಾಟದಲ್ಲಿರುವ ವಿದ್ಯಾರ್ಥಿಗಳ ಬದುಕನ್ನು ಈ ಸೀಸನ್ ಪ್ರತಿಬಿಂಬಿಸುತ್ತದೆ” ಎಂದು ಆರ್ಚೀ ಪಾತ್ರದಲ್ಲಿ ನಟಿಸಿರುವ ಅಹ್ಸಾಸ್ ಚನ್ನಾ ಹೇಳಿದರು.
ನೀರಜ್ ಪಾತ್ರದಲ್ಲಿ ನಟಿಸಿರುವ ಜ್ಞಾನೇಂದ್ರ ತ್ರಿಪಾಠಿ, “ಅಂತಿಮ ಪ್ರಯತ್ನದಲ್ಲಿ ಯಶಸ್ಸು ಪಡೆಯಲು ಆತ ಎಲ್ಲವನ್ನೂ ಹೂಡುತ್ತಾನೆ. ಆದರೆ ಈ ಸೀಸನ್ ಶೈಕ್ಷಣಿಕ ಒತ್ತಡದ ಜೊತೆಗೆ ಸ್ನೇಹ, ಒಂಟಿತನ, ಆತ್ಮಸಂದೇಹ, ಮತ್ತೆ ಎದ್ದೇಳುವ ಧೈರ್ಯವನ್ನು ಕೂಡ ತೋರಿಸುತ್ತದೆ” ಎಂದು ಹಂಚಿಕೊಂಡರು.
ದಿ ವೈರಲ್ ಫೀವರ್ (TVF) ನಿರ್ಮಿಸಿರುವ ಈ ಸರಣಿಯಲ್ಲಿ ಪ್ರೀತ್ ಕಮಾನಿ, ಐಶ್ವರ್ಯಾ ಓಜಾ, ಅನ್ಮೋಲ್ ಕಜಾನಿ, ರೋಹನ್ ಜೋಶಿ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರತೀಶ್ ಮೆಹ್ತಾ ನಿರ್ದೇಶನ ಮಾಡಿರುವ ಈ ಕೃತಿ, ತತ್ಸತ್ ಪಾಂಡೆ, ಹರೀಶ್ ಪೆಡ್ಡಿಂಟಿ ಹಾಗೂ ಖುಷ್ಬು ಬೈದ್ ಅವರ ಕಥಾ–ಪರಿಕಲ್ಪನೆ ಹೊಂದಿದೆ.
“ನೈಜ ಜೀವನಕ್ಕೆ ಹತ್ತಿರವಾಗಿರುವ ಕಥೆಗಳನ್ನು ಹೇಳುವುದೇ ನಮ್ಮ ಉದ್ದೇಶ. ‘ಹಾಫ್ ಸಿಎ 2’ ವಿದ್ಯಾರ್ಥಿಗಳ ಕನಸು–ಹೋರಾಟವನ್ನು ದೇಶದಾದ್ಯಂತ ತಲುಪಿಸುವ ಕೃತಿ” ಎಂದು TVF ಅಧ್ಯಕ್ಷ ವಿಜಯ್ ಕೋಶಿ ಅಭಿಪ್ರಾಯಪಟ್ಟರು.
ಆಗಸ್ಟ್ 27ರಿಂದ ಅಮೆಜಾನ್ ಎಂಎಕ್ಸ್ ಪ್ಲೇಯರ್‌ನಲ್ಲಿ ಈ ಸೀಸನ್ ಲಭ್ಯ.