ನವದೆಹಲಿ: ಮಹಾರಾಷ್ಟ್ರ ಬಿಜೆಪಿ ಘಟಕಕ್ಕೆ ಅಧ್ಯಕ್ಷರನ್ನು ಘೋಷಿಸಿರುವ ಪಕ್ಷದ ಹೈಕಮಾಂಡ್, ಇದೀಗ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪರಿಪೂರ್ಣಗೊಳಿಸಿದೆ. ಮಧ್ಯಪ್ರದೇಶದ ಜೊತೆಗೆ ಕರ್ನಾಟಕ ಬಿಜೆಪಿಗೂ ಹೊಸ ರಾಜ್ಯಾಧ್ಯಕ್ಷರ ನೇಮಕವಾಗುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಕರ್ನಾಟಕಕ್ಕೆ ಯಾವಾಗ? ಎಂಬ ಪ್ರಶ್ನೆ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿದೆ.
ಮಹಾರಾಷ್ಟ್ರದ ನಂತರ ಮಧ್ಯಪ್ರದೇಶಕ್ಕೂ ನೂತನ ಬಿಜೆಪಿಯ ಅಧ್ಯಕ್ಷರ ಆಯ್ಕೆ ಮೂಲಕ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದ್ದು, ಇದೀಗ ಎಲ್ಲರ ಕಣ್ಣು ಕರ್ನಾಟಕದತ್ತ ನೆಟ್ಟಿವೆ. ರಾಜ್ಯ ಬಿಜೆಪಿ ಘಟಕದ ಮುಂದಿನ ನಾಯಕತ್ವ ಯಾರಿಗೆ ಎಂಬ ಪ್ರಶ್ನೆ ಪಕ್ಷದೊಳಗೂ, ಕಾರ್ಯಕರ್ತರ ನಡುವೆ ಮತ್ತು ರಾಜಕೀಯ ವಲಯದಲ್ಲೂ ನಿರೀಕ್ಷೆ ಹುಟ್ಟಿಸಿದೆ.
ಮಧ್ಯಪ್ರದೇಶ ಬಿಜೆಪಿ ಘಟಕದ ನೇತೃತ್ವಕ್ಕೆ ಬೆತುಲ್‌ನ ಹಾಲಿ ಶಾಸಕ, ಮಾಜಿ ಸಂಸದ ಹೇಮಂತ್ ಖಂಡೇಲ್ವಾಲ್ ಆಯ್ಕೆಯಾಗಿದ್ದು, ಜತೆಗೇ ಕರ್ನಾಟಕ ಘಟಕದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮುಂದಿನ ಸ್ಥಾನಮಾನ ಕುರಿತಂತೆಯೂ ತೀವ್ರ ಕುತೂಹಲ ಹುಟ್ಟಿದೆ.
ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಯಲಾರರಾ? ಪಕ್ಷದೊಳಗಿನ ಲಾಬಿಗಿಂತ ಕುಟುಂಬದವರಿಂದಲೇ ಲಾಭಿ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿರ್ಧಾರಕ್ಕಾಗಿ ಕಾಯುತ್ತಿರುವ ಕರ್ನಾಟಕ ಘಟಕದಲ್ಲಿ ವಿಜಯೇಂದ್ರ ಮುಂದುವರಿಯುವ ಸಾಧ್ಯತೆಗಳಿರುವಂತೆಯೇ, ಬದಲಾವಣೆಯ ಮಾತುಗಳು ಸಹ ಕೇಳಿಬರುತ್ತಿವೆ. ವಿಜಯೇಂದ್ರ ಪರ ಅವರ ತಂದೆ, ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಸಹೋದರ ಮತ್ತು ಸಂಸದ ಬಿ.ವೈ. ರಾಘವೇಂದ್ರ ತೆರೆಮರೆಯಲ್ಲಿ ಲಾಭಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ‘ವಿಜಯೇಂದ್ರ ಹುದ್ದೆಯಿಂದ ಕೆಳಗಿಳಿದರೆ, ಅವರು ಪಕ್ಷದಲ್ಲಿ ಮೂಲೆಗುಂಪಾಗುವ ಸಾಧ್ಯತೆ ಇದೆ’ ಎಂಬ ಆತಂಕ ಇವರದ್ದು.
ಇನ್ನೊಂದೆಡೆ ಶಿಸ್ತಿನಿಂದ ಪಕ್ಷ ವಿರೋಧಿ ಶಕ್ತಿಗಳ ಕೈಕಟ್ಟಿ ಹಾಕಿರುವ ವಿಜಯೇಂದ್ರ ಅವರು ಕೆಲವು ‘ಹೈ’ ನಾಯಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹಲವು ಕ್ಷೇತ್ರಗಳನ್ನು ಕಳೆದುಕೊಂಡ ಬೆಳವಣಿಗೆ ವಿಜಯೇಂದ್ರ ನಾಯಕತ್ವದ ವೈಫಲ್ಯದತ್ತಲೂ ಬೊಟ್ಟುಮಾಡುವಂತಿದೆ. ಸಿಎಂ ಹಾಗೂ ಕಾಂಗ್ರೆಸ್ ಅಧ್ಯಕ್ಷರೊಂದಿಗೂ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದರಿಂದಾಗಿ ಬಿಜೆಪಿಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಅಳೆಯುವ, ತೂಗುವ, ನಿರ್ಧಾರಕ್ಕೆ ಮುನ್ನ ಚಿಂತನ-ಮಂಥನ!
ಪಕ್ಷದ ಹೈಕಮಾಂಡ್ ಹಾಗೂ ಆರೆಸ್ಸೆಸ್ ನಾಯಕರ ಪಾಳಯದಲ್ಲಿ ರಾಜ್ಯ ನಾಯಕತ್ವದ ಹುಡುಕಾಟ ನಡೆಯುತ್ತಿದೆ. ‘ಯಾರು ಮುಂದಿನ ಸಾರಥಿ?’ ಎಂಬ ಕುರಿತು ಮಂಥನ ನಡೆಯುತ್ತಿದೆ. ಜಾತಿ, ಪ್ರಾದೇಶಿಕ ಹಿನ್ನಲೆ, ಸಂಘದ ನಿಷ್ಠೆ, ಹಾಗೂ ಮುಂದಿನ ವಿಧಾನಸಭಾ ಚುನಾವಣೆಯ ತಯಾರಿಯು ಈ ಆಯ್ಕೆಗೂ ಆದರ್ಶ ಪರಿಪಾಠಕ್ಕೂ ತೋಚುತ್ತಿರುವ ಅಂಶಗಳಾಗಿವೆ. ಅದರಲ್ಲೂ ಮಾಧ್ಯಮ ವರದಿಗಳನ್ನು ಆಧರಿಸಿ ಅಳೆದು ತೂಗಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಆಗಸ್ಟ್ ವೇಳೆಗೆ ನಿರ್ಧಾರ?
ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನವೊಂದನ್ನು ಆಗಸ್ಟ್ ಒಳಗೆ ಪ್ರಕಟಿಸಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದ ಬಿಜೆಪಿ ಘಟಕದ ಭವಿಷ್ಯಕ್ಕೆ ಪ್ರಾಮುಖ್ಯತೆ ನೀಡಿದರೆ, 2028ರ ವಿಧಾನಸಭಾ ಚುನಾವಣೆಗೆ ಹಾದಿ ಈಗಲೇ ಆರಂಭವಾಗಬೇಕು ಎಂಬ ಅಭಿಪ್ರಾಯ ವರಿಷ್ಠರದ್ದು. ಹಾಗಾಗಿ ಆರೆಸ್ಸೆಸ್ ನಾಯಕರು ಪತ್ರಕರ್ತರ ಹಾಗೂ ರಾಜಕೀಯ ವಿಶ್ಲೇಷಕರ ಅಭಿಪ್ರಾಯಗಳನ್ನು ಕ್ರೋಡೀಕರಿಸುತ್ತಿದ್ದಾರೆ. ಒಂದೊಮ್ಮೆ ಸಮರ್ಥರನ್ನು ಗುರುತಿಸಿದರೂ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನಂತರವೇ ಕರ್ನಾಟಕ ಬಿಜೆಪಿ ಸಾರಥಿಯ ಆಯ್ಕೆ ನಡೆಯಬಹುದು ಎಂದು ಉನ್ನತ ಮೂಲಗಳು ಹೇಳಿವೆ.