ಬೆಂಗಳೂರು: ಬೆಂಗಳೂರು ಗಾರ್ಬೇಜ್ ಸಿಟಿಯಾಗುತ್ತಿದೆ ಎಂಬ ಬಿಜೆಪಿ ಟೀಕೆ ಬಾಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಇರುವುದೇ ಟೀಕೆ ಮಾಡಲು, ರಾಜಕಾರಣ ಮಾಡಲು. ಈ ಸಮಸ್ಯೆಗೆ ಪರಿಹಾರ ನೀಡಲು ನಾನು ಪ್ರಯತ್ನವಾದರೂ ಮಾಡುತ್ತಿದ್ದೇನೆ ಎಂದರು.
ಈ ಬಗ್ಗೆ ಅಧ್ಯಯನ ಮಾಡಲು, ಚೆನ್ನೈ, ಹೈದರಬಾದ್, ಮುಂಬೈಗೆ ಭೇಟಿ ನೀಡಿದ್ದೆ. ನಗರದ ಹೊರಗೆ ಕಸ ವಿಲೇವಾರಿಗೆ ನಾಲ್ಕು ಕಡೆಗಳಲ್ಲಿ ಜಾಗ ಹುಡುಕಲಾಗಿದೆ. ಹೀಗೆ ನನ್ನದೇ ಆದ ಪ್ರಯತ್ನ ಮಾಡುತ್ತಿದ್ದೇನೆ. ಅವರು ಏನು ಮಾಡಿದ್ದಾರೆ?’ ಎಂದು ಪ್ರಶ್ನಿಸಿದರು.
ಡಿಸಿಎಂ ಕೇವಲ ಪ್ರಚಾರಕ್ಕೆ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತಿದ್ದು, ಕೆಲಸ ಆಗುತ್ತಿಲ್ಲ ಎಂಬ ಟೀಕೆ ಬಗ್ಗೆ ಕೇಳಿದಾಗ, “ನಾನು ಟೀಕೆಗಳಿಗೆ ಉತ್ತರ ಕೊಡುವುದಿಲ್ಲ. ನಮ್ಮ ಕೆಲಸಗಳೇ ನಿಮ್ಮ ಕಣ್ಣಿಗೆ ಕಾಣಲಿದೆ” ಎಂದು ತಿಳಿಸಿದರು. ಮೇಕೆದಾಟು ಯೋಜನೆ ವಿಚಾರವಾಗಿ ಕೇಳಿದಾಗ, “ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಕನ್ನಡ ಚಿತ್ರರಂಗದಲ್ಲಿ ಮೀ ಟೂ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚನೆಗೆ ಆಗ್ರಹದ ಬಗ್ಗೆ ಕೇಳಿದಾಗ, “ನನಗೆ ಮೀ ಟೂ ವಿಚಾರವಾಗಿ ಹೆಚ್ಚಿನ ಮಾಹಿತಿಯಿಲ್ಲ. ಈ ವಿಚಾರವಾಗಿ ತಿಳಿದು ಮಾತನಾಡುತ್ತೇನೆ” ಎಂದು ತಿಳಿಸಿದರು.