ಬೆಂಗಳೂರು: “ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ವರುಣ ದೇವನ ಕೃಪೆಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೋರ್ಟ್ ಆದೇಶ ಪಾಲನೆ ಹಾಗೂ ರಾಜ್ಯದ ರೈತರ ಹಿತ ರಕ್ಷಣೆ ಸಾಧ್ಯವಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿದಿದ್ದಾರೆ.
ನಾವು ಮುಂಜಾಗೃತವಾಗಿ ರಂಗನತಿಟ್ಟು ಸೇರಿದಂತೆ ಇತರೆಡೆ ದೋಣಿ ವಿಹಾರ ಸ್ಥಗಿತಗೊಳಿಸಿದ್ದು, ಹೊಳೆಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದೇವೆ. ಕರಾವಳಿ ಭಾಗದಲ್ಲಿ ಕೇರಳ ಮೂಲದ ಚಾಲಕ ವಾಹನ ಸಮೇತ, ಗುಡ್ಡ ಕುಸಿತಕ್ಕೆ ಸಿಲುಕಿದ್ದಾನೆ. ಮಳೆ ಮುಂದುವರಿದಿರುವ ಕಾರಣ ತೆರವು ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸಚಿವರು ಶಾಸಕರು, ನಾಯಕರು ಸ್ಥಳದಲ್ಲಿದ್ದು, ಅವರ ಕರ್ತವ್ಯ ನಿಭಾಯಿಸುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.
ಮಳೆ ಹಾನಿಯಾಗಿರುವ ಅಂಕೋಲಾ ಸೇರಿದಂತೆ ಇತರ ಕಡೆಗಳಿಗೆ ಕುಮಾರಸ್ವಾಮಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, “ಅವರು ಯಾವ ಫೀಲ್ಡಿಗೆ ಇಳಿದಿದ್ದಾರೆ? ಅವರು ಸಿಆರ್ ಪಿಎಫ್ ಪಡೆ ಕರೆಸಿ, ತೆರವು ಕಾರ್ಯಕ್ಕೆ ನೆರವಾಗಿದ್ದರೆ, ಫೀಲ್ಡಿಗೆ ಇಳಿದಿದ್ದಾರೆ ಎಂದು ಹೇಳಬಹುದಿತ್ತು. ಅನಾಹುತ ನಡೆದ ಒಂದೇ ತಾಸಿನಲ್ಲಿ ನಮ್ಮ ಸಚಿವರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ನಮ್ಮ ಸಚಿವರಾದ ಮಂಕಳಾ ವೈದ್ಯ, ಕೃಷ್ಣ ಭೈರೇಗೌಡರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಈ ವಿಚಾರದಲ್ಲಿ ಈಗ ರಾಜಕಾರಣ ಮಾಡುವುದು ಬೇಡ. ಮೊದಲು ಜನರ ರಕ್ಷಣೆ ಮಾಡೋಣ” ಎಂದರು.
ನಿಗಮಗಳಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದು, ಸರ್ಕಾರ ಎಲ್ಲಾ ನಿಗಮಗಳ ಹಣ ಹಿಂಪಡೆಯುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ನಾವು ನಮ್ಮ ಅಧ್ಯಕ್ಷರುಗಳಿಗೆ ಈ ವಿಚಾರವಾಗಿ ಹೇಳಿದ್ದೆವು. ನಿಗಮಗಳಲ್ಲಿ ಕೆಲವು ಅಧಿಕಾರಿಗಳು ಖದೀಮರು ಸೇರಿಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲೂ ತಿಂದು ಈಗಲೂ ಸೇರಿಕೊಂಡಿದ್ದಾರೆ. ಬಿಜೆಪಿ ಅವಧಿಯಲ್ಲಿ 300 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ. ಅದೇ ಅಧಿಕಾರಿಗಳು ಈಗ ಇದ್ದು, ಡಿ ವರ್ಗದ ನೌಕರರನ್ನು ಎಂಡಿ ಮಾಡಿದ್ದಾರೆ. ಅಂತಹ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗುವುದು. ಹೀಗಾಗಿ ಆರ್ಥಿಕ ಇಲಾಖೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ” ಎಂದರು.