ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಜೈಲಿನಿಂದಲೇ ಸಂದೇಶ ರವಾನಿಸಿದ್ದಾರೆ. ತಮ್ಮನ್ನು ನೋಡಲು ಯಾರೂ ಬರಬೇಡಿ ಎಂದು ದರ್ಶನ ಅವರು ಅಧಿಕಾರಿಗಳ ಮೂಲಕ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ ೧೭ ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಅವರ ಭೇಟಿಗಾಗಿ ಅಭಿಮಾನಿಗಳು ತೆರಳುತ್ತಿದ್ದಾರೆ. ಆದರೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಶುಕ್ರವಾರ ಸೌಮ್ಯ ಹೆಸರಿನ ವಿಶೇಷ ಚೇತನ ಯುವತಿ ದರ್ಶನ್ ಭೇಟಿಗೆ ಬಂದಿದ್ದರು. ದರ್ಶನ್ ಭೇಟಿಗೆ ಹಠ ಮಾಡಿದ್ದರೂ ಪೊಲೀಸರು ಅನುಮತಿ ನೀಡಿಲ್ಲ.
ಈ ಬೆಳವಣಿಗೆಯಿಂದ ಬೇಸರಗೊಂಡಿರುವ ದರ್ಶನ್, ತಮ್ಮನ್ನು ಭೇಟಿಯಾಗಲು ಯಾರೂ ಜೈಲಿನತ್ತ ಬರುವುದು ಬೇಡ ಎಂಬ ಸಂದೇಶವನ್ನು ಅಧಿಕಾರಿಗಳ ಮೂಲಕ ರವಾನಿಸಿದ್ದಾರೆ ಎನ್ನಲಾಗಿದೆ.




























































