ಬೆಂಗಳೂರು: ಕೆಎಸ್ಸಾರ್ಟಿಸಿ ಸೇರಿದಂತೆ ರಾಜ್ಯ ಸಾರಿಗೆ ನಿಗಮಗಳ ನಿವೃತ್ತ ಅಧಿಕಾರಿಗಳಿಗೆ ಹಾಗೂ ನೌಕರ ವೃಂದಕ್ಕೆ ಸಾರಿಗೆ ಹಾಗೂ ಮುಜರಾಯಿ ಸಚಿವರ ಕಚೇರಿಯಿಂದ ಸಿಹಿ ಸುದ್ದಿ ಕೇಳಿಬಂದಿದೆ ನಿವೃತ್ತಿ ಸೌಲಭ್ಯ ಹೆಚ್ಚಿಸಬೇಕೆಂಬ ಮನವಿಗೆ ಸರ್ಕಾರ ಸ್ಪಂಧಿಸಿದ್ದು ಸಂಸ್ಥೆಗಾಗಿ ದುಡಿದ ಮಂದಿ ಸಂತಸ ಹಂಚಿಕೊಂಡಿದ್ದಾರೆ.
ನಿವೃತ್ತಿ ಹೊಂದಿದ ಅಧಿಕಾರಿಗಳು ಹಾಗೂ ನೌಕಕರು ಸುಮಾರು 10000 ಮಂದಿಗೆ ಈ ಹಿಂದೆ ದಿನಾಂಕ 01.03.2023 ರಿಂದ ಜಾರಿಗೊಳಿಸಿದ
ಶೇ.15 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ, ಅಂತಿಮ ಆರ್ಥಿಕ ಸೌಲಭ್ಯಗಳಾದ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣ( ಅಂದಾಜು ನಾಲ್ಕು ಸಾರಿಗೆ ನಿಗಮಗಳ ಮೊತ್ತ ರೂ.220 ಕೋಟಿ ) ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ.
ಈ ಸಂಬಂಧ ಹಲವು ಬಾರಿ ಸಾರಿಗೆ ಸಚಿವರನ್ನು ಭೇಟಿ ಮಾಡಿ ಸದರಿ ಆದೇಶವನ್ನು ಬಿಡುಗಡೆಗೊಳಿಸಬೇಕೆಂದು ಕಾರ್ಮಿಕ ಸಂಘಟನೆಗಳ ಮುಖಂಡರುಗಳು ಮನವಿ ಸಲ್ಲಿಸಿದ್ದರು. ಈ ಮನವಿಗಳಿಗೆ ಸ್ಪಂದಿಸಿ ಮಾರ್ಚ್ ನಲ್ಲಿಯೇ ಸಚಿವರು ಭರವಸೆ ನೀಡಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಕಾರಣ ಬಿಡುಗಡೆಯಾಗದೆ ಉಳಿದಿದ್ದ ಆದೇಶಕ್ಕೆ ಇಂದು ಅಂಕಿತ ಬಿದ್ದಿದೆ.
ಸರ್ಕಾರದ ಆದೇಶ ಸಂಖ್ಯೆ ಟಿ.ಡಿ 12 ಟಿಸಿಬಿ 2023 ಬೆಂಗಳೂರು ದಿನಾಂಕ 17.03.2023 ರಲ್ಲಿ ಅಧಿಕಾರಿ ಮತ್ತು ನೌಕರರು ದಿನಾಂಕ 31.12.2019 ರಂದು ಪಡೆಯುತ್ತಿದ್ದ ಮೂಲವೇತನವನ್ನು ಶೇ.15 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ, 01.03.2023 ರಿಂದ ಜಾರಿಗೊಳಿಸಲು ಆದೇಶಿಸಿರುವಂತೆ, 01.03.2023 ರಂದು ಸಂಸ್ಥೆಯ ಸೇವೆಯಲ್ಲಿದ್ದ (On Roll) ಅಧಿಕಾರಿ/ನೌಕರರಿಗೆ 01.01.2020ರಿಂದ 28.02.2023 ರ ಅವಧಿಯನ್ನು ನೋಷನಲ್ ಆಗಿ ಪರಿಗಣಿಸಿ ವೇತನ ನಿಗದಿಪಡಿಸಿ, 01.03.2023ರಿಂದ ಜಾರಿಗೊಳಿಸಿ, ಏಪ್ರಿಲ್-2023ರ ಮಾಹೆಯಿಂದ ಮತ್ತು ಮುಂದಕ್ಕೆ ವೇತನದಲ್ಲಿ ಅನುಷ್ಠಾನಗೊಳಿಸಲು ಹಾಗೂ ಮಾರ್ಚ್-2023ರ ಮಾಹೆಯ ವ್ಯತ್ಯಾಸವನ್ನು ಏಪ್ರಿಲ್-2023 ರ ಮಾಹೆಯ ವೇತನದೊಂದಿಗೆ ಸೇರಿಸಿ ಪಾವತಿಸಲು ಸುತ್ತೋಲೆ ಸಂಖ್ಯೆ 16/2023 ದಿನಾಂಕ 28.03.2023 ರಲ್ಲಿ ತಿಳಿಸಲಾಗಿತ್ತು.
ಪ್ರಸ್ತುತ 01.01.2020ರಿಂದ 28.02.2023ರ ಅವಧಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ನೌಕರರಿಗೆ ಅರ್ಹ ದಿನಾಂಕದವರೆಗೆ ವೇತನವನ್ನು ನೋಷನಲ್ ಆಗಿ ನಿಗದಿಪಡಿಸಲು ಹಾಗೂ ನಿಗದಿಪಡಿಸಿದ ವೇತನವನ್ನು ಅಧಿಕಾರಿ/ನೌಕರನು ಅಂತಿಮ ದಿನಾಂಕದಂದು ಪಡೆಯುತ್ತಿದ್ದ ಮೂಲವೇತನವೆಂದು ಪರಿಗಣಿಸಿ, ಅಂತಿಮ ಆರ್ಥಿಕ ಸೌಲಭ್ಯಗಳಾದ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳನ್ನು ಮಾತ್ರ ಲೆಕ್ಕಾಚಾರ ಮಾಡಿ ಪಾವತಿಸಲು ಅನುಮೋದನೆ ನೀಡಲಾಗಿದೆ.
ಅದರಂತೆ 01.01.2020ರಿಂದ 28.02.2023ರ ಅವಧಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ನೌಕರರಿಗೆ ಅರ್ಹ ದಿನಾಂಕದವರೆಗೆ ಸುತ್ತೋಲೆ ಸಂಖ್ಯೆ 16/23 ರಲ್ಲಿ ತಿಳಿಸಿರುವ ವಿಧಾನಗಳನ್ನು ಅನುಸರಿಸಿ, ಪರಿಷ್ಕೃತ ವೇತನ ನಿಗದಿ (ನೋಷನಲ್ ಆಗಿ) ಪಟ್ಟಿಗಳನ್ನು 31.08.2024 ರೊಳಗಾಗಿ ತಯಾರಿಸಲು ಅಗತ್ಯ ಕ್ರಮಕೈಗೊಳ್ಳುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಷನಲ್ ಆಗಿ ನಿಗದಿಪಡಿಸಿದ ಪರಿಷ್ಕೃತ ಮೂಲವೇತನವನ್ನು ಅಂತಿಮ ಆರ್ಥಿಕ ಸೌಲಭ್ಯಗಳಾದ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳ ವ್ಯತ್ಯಾಸಗಳ ಪಾವತಿಗಾಗಿ ಮಾತ್ರ ಪರಿಗಣಿಸುವುದು. ಅರ್ಹ ಸೇವಾ ವಿಮುಕ್ತ ಅಧಿಕಾರಿ/ನೌಕರರ ಪರಿಷ್ಕೃತ ವೇತನ ನಿಗದಿಯನ್ವಯ ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳ ವ್ಯತ್ಯಾಸಗಳನ್ನು ಲೆಕ್ಕಾಚಾರಗೊಳಿಸಿ, ಗಳಿಕೆ ರಜೆ ನಗದೀಕರಣ ಬಿಲ್ಲಿನಲ್ಲಿ ಶಾಸನ ಬದ್ದ ಕಡಿತಗಳನ್ನು ಹಾಗೂ ಅಧಿಕಾರಿ/ನೌಕರನಿಂದ ಬರಬೇಕಾದ ಯಾವುದೇ ಬಾಕಿ ಮೊತ್ತವಿದ್ದಲ್ಲಿ ಕಡಿತಗೊಳಿಸಿ ಪಾವತಿಸಬೇಕಾದ ನಿವ್ವಳ ಮೊತ್ತದ ಕ್ಲೀಮ್‌ಗಳನ್ನು 30.09.2024 ರೊಳಗಾಗಿ ಸಿದ್ದಪಡಿಸಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳುವುದು.
ಕರಾರಸಾ/ಬೆಂಮನಸಾ/ವಾಕರಸಾ/ಕಕರಸಾ ಸಂಸ್ಥೆಗಳು ಉಪದಾನ ಮತ್ತು ನಿವೃತ್ತಿ ಗಳಿಕೆ ರಜೆ ನಗದೀಕರಣಗಳ ವ್ಯತ್ಯಾಸದ ಕ್ಲೀಮ್‌ಗಳ ಪಾವತಿಯ ಕುರಿತು ಆಯಾ ಸಂಸ್ಥೆಗಳು ಆರ್ಥಿಕ ಪರಿಸ್ಥಿತಿಗನುಗುಣವಾಗಿ ನಿರ್ಧರಿಸಿ, ಸಾಧ್ಯವಾದಲ್ಲಿ 2024-25 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪಾವತಿಸಲು ಅಗತ್ಯ ಕ್ರಮಕೈಗೊಳ್ಳುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.




























































