ಬೆಂಗಳೂರು: ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. 11 ಸ್ಥಾನಗಳಿಗೆ ಆಯ್ಕೆ ನಡೆಯಲಿದ್ದು, ವಿಧಾನಸಭೆಯಲ್ಲಿನ ಸಂಖ್ಯಾ ಬಲ ಆಧರಿಸಿ ಕಾಂಗ್ರೆಸ್ ಪಕ್ಷದಿಂದ 7 ಮಂದಿ ಮೇಲ್ಮನೆಗೆ ಆಯ್ಕೆಯಾಗಲು ಅವಕಾಶ ಇದೆ. ಹಾಗಾಗಿ ಆಡಳಿತಾ ರೂಢ ಕಾಂಗ್ರೆಸ್ ನಾಯಕರು ಭರ್ಜರಿ ಲಾಭಿ ನಡೆಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಲೋಪಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾರ್ಯಕರ್ತರ ಶ್ರಮದ ಜೊತೆಯಲ್ಲೇ ತಂತ್ರಗಾರಿಕೆ ನಡೆದಿದ್ದರಿಂದಾಗಿ ಈ ಗೆಲುವು ಸಾಧ್ಯವಾಗಿದ್ದು, ಅದೇ ರೀತಿಯ ತಂತ್ರಗಾರಿಕೆಯಿಂದಾಗಿಯೇ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಯಶೋಗಾಥೆ ಬರೆಯುತ್ತಿದೆ. ಹಾಗಾಗಿ ತಂತ್ರಗಾರಿಕೆಯ ಹಿಂದಿನ ಶಕ್ತಿಗಳಿಗೆ ಮನ್ನಣೆ ಸಿಗಬೇಕಿದೆ ಎಂಬುದು ಕಾಂಗ್ರೆಸ್ ಪಕ್ಷದ ಪ್ರಮುಖರ ಪ್ರತಿಪಾದನೆಯಾಗಿದೆ. ಹಾಗಾಗಿ ರಾಜಕೀಯ ವಿಶ್ಲೇಷಕ, ರಾಜತಾಂತ್ರಿಕ ಸಲಹೆಗಾರರಾಗಿರುವ ರಮೇಶ್ ಬಾಬು ಅವರಿಗೆ ಈ ಬಾರಿ ಮೇಲ್ಮನೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ವಿಧಾನ ಪರಿಷತ್ತಿನಲ್ಲಿ ಪಕ್ಷದ ಪರವಾಗಿ ಮುತ್ಸದ್ದಿತನದ ಮಾತುಗಳನ್ನಾಡುವ ತಾಕತ್ತು ರಮೇಶ್ ಬಾಬು ಅವರಿಗೆ ಇದ್ದು, ಅವರು ಎಲ್ಲಾ ಪಕ್ಷಗಳನ್ನು ಮಣಿಸುವ ಚಾಕಚಕ್ಯತೆ ಹೊಂದಿದ್ದಾರೆ ಎಂಬುದು ಹಲವರ ವಾದ.
ಇನ್ನೊಂದೆಡೆ ಜಾತಿ, ಪ್ರದೇಶ ಮತ್ತಿತರ ಪ್ರಭಾವ ಬೀರಿ ಅವಕಾಶ ಗಿಟ್ಟಿಸಿಕೊಳ್ಳಲು ಅನೇಕರು ಕಸರತ್ತು ನಡೆಸುತ್ತಿದ್ದಾರೆ. ಜೊತೆಗೆ ನಿವೃತ್ತಿಯ ಹಾದಿಯಲ್ಲಿರುವ ನಾಯಕರು ಪುನರಾಯ್ಕೆ ಬಯಸಿದ್ದಾರೆ. ಅರವಿಂದ ಕುಮಾರ್ ಅರಳಿ, ಎನ್.ಎಸ್. ಬೋಸರಾಜು, ಕೆ. ಗೋವಿಂದರಾಜು, ಹರೀಶ್ ಕುಮಾರ್ ಹೆಸರುಗಳೂ ಮುಂಚೂಣಿಯಲ್ಲಿವೆ.
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಎಲ್. ನಾರಾಯಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ (ಆಡಳಿತ) ವಿಜಯ ಮುಳಗುಂದ, ಪ್ರಧಾನ ಕಾರ್ಯದರ್ಶಿ ವಿನಯ್ ಕಾರ್ತಿಕ್ ಹೆಸರು ಕೂಡಾ ಕೇಳಿಬರುತ್ತಿದೆ. ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್‌ಗೌಡ, ಐಶ್ವರ್ಯ ಮಹದೇವ್, ಕವಿತಾ ರೆಡ್ಡಿ, ಸಿ.ಎಸ್. ದ್ವಾರಕಾನಾಥ್ ಹೆಸರು ಕೂಡಾ ರೇಸ್‌ನಲ್ಲಿದೆ. ಈ ಪೈಕಿ ಪಕ್ಷದ ವರಿಷ್ಠರು ಯಾರನ್ನು ಸೂಚಿಸುತ್ತಾರೆ ಎಂಬುದೇ ಕುತೂಹಲ.