ಇದು 2017ರಲ್ಲಿ ನಡೆದ ಹತ್ಯಾಕಾಂಡ. ಬೇರೆ ಜಾತಿಯ ಯುವಕನನ್ನು ಮದುವೆಯಾದ ಕಾರಣಕ್ಕಾಗಿ ಗರ್ಭಿಣಿಯನ್ನು ಕುಟುಂಬ ಸದಸ್ಯರೇ ಅಮಾನುಷವಾಗಿ ಕೊಂದ ಪ್ರಕರಣ.. ಹಂತಕರ ಪೈಕಿ ಇಬ್ಬರಿಗೆ ಗಲ್ಲು, ಐವರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ.
ವಿಜಯಪುರ: 2017ರಲ್ಲಿ ಗುಂಡಕನಾಳದಲ್ಲಿ ನಡೆದಿರುವ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ವಿಜಯಪುರದ ನ್ಯಾಯಾಲಯವು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟಿಸಿದೆ. ವಿಜಯಪುರ ಜಿಲ್ಲಾ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಅನ್ಯ ಜಾತಿಯ ಯುವಕನನ್ನು ಮದುವೆಯಾದ ಕಾರಣಕ್ಕಾಗಿ ಯುವತಿಯನ್ನು ಗರ್ಬಿಣಿ ಎಂದೂ ನೋಡದೆ ಬೆಂಕಿ ಹಚ್ಚಿ ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಹೆತ್ತವರೇ ಸಂಬಂಧಿಕರೊಂದಿಗೆ ಸೇರಿ ನಡೆಸಿದ್ದ ಈ ಪ್ರಕರಣದಲ್ಲಿ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದ ಇಬ್ರಾಹಿಂ ಸಾಬ ಮಹಮ್ಮದ ಸಾಬ್ ಅತ್ತಾರ ಹಾಗೂ ಅಕ್ಬರ್ ಮಹಮ್ಮದ ಸಾಬ್ ಅತ್ತಾರಗೆ ಗಲ್ಲು ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿದೆ.
ಹತ್ಯೆಗೀಡಾದ ಮಹಿಳೆಯ ತಾಯಿ ರಮಜಾನಬಿ ಅತ್ತಾರ ಹಾಗೂ ಆಕೆಯ ಸಂಬಂಧಿಕರಾದ ಅಜಮಾ ಜಿಲಾನಿ ದಖನಿ, ದಾವಲಬಿ ಬಂದೇನವಾಜ್ ಜಮಾದಾರ, ದಾವಲಬಿ ಸುಭಾನ್ ಧನ್ನೂರ, ಜಿಲಾನಿ ಅಬ್ದುಲ್‌ಖಾದರ್ ದಖನಿಗೆ ಜೀವಾವಧಿ ಶಿಕ್ಷೆ ಹಾಗೂ 4.19 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.


















































