ಬೆಳಗಾವಿ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಲವ್ ಜಿಹಾದಿಯ ಸ್ಪರ್ಷವಾಗಿದ್ದು ಹತ್ಯೆ ವೇಳೆ ರುದ್ದ ರಾಜ್ಯಾದ್ಯಂತ ಪ್ರತಿಭಟನೆ ಭುಗಿಲೆದ್ದಿರುವಾಗಲೇ, ನೆರೆ ಜಿಲ್ಲೆ ಬೆಳಗಾವಿಯಲ್ಲಿ ಅಕ್ರಮ ಗೋ ಸಾಗಣಿಕೆಯ ಆರೋಪ ಉದ್ವಿಗ್ನತೆಗೆ ಕಾರಣವಾಗಿದೆ.
ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಲಾಯಿಯನ್ನು ತಡೆದು, ಗೋವುಗಳನ್ನು ಜಿಲ್ಲಾಡಳಿತದ ವಶಕ್ಕೆ ಒಪ್ಪಿಸಿದ್ದಾರೆ. 50ಕ್ಕೂ ಹೆಚ್ಚು ಹಿಂದೂಪರ ಕಾರ್ಯಕರ್ತರು ಈ ಕಾರ್ಯಾಚರಣೆಯಲ್ಲಿದ್ದರು ಎನ್ನಲಾಗಿದ್ದು, ಲಾರಿ ಚಾಲಕ ಮತ್ತು ಹಿಂದೂ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಲಾರಿಯನ್ನು ಮಾರ್ಗ ಮಧ್ಯೆ ಹೆದ್ದಾರಿಯಲ್ಲಿ ಹಿಂದೂ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಜಟಾಪಟಿ ನಡೆದು ಕಾಸರಗೋಡು ಮೂಲದ ಲಾರಿ ಚಾಲಕ ಉಮರ್ ಮೋಯಿದ್ದೀನ್ ಗಾಯಗೊಂಡಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಡಿಸಿಪಿ ರೋಹನ್ ಜಗದೀಶ್ ಹಾಗೂ ಹಿರೇಬಾಗೇವಾಡಿ ಪೊಲೀಸ್ ಠಾಣಾ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.
ಈ ನಡುವೆ, ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಲಾರಿಯಲ್ಲಿದ್ದ 28 ಗೋವುಗಳನ್ನು ಕಮಕಾರಟ್ಟಿಯಲ್ಲಿರುವ ಮಹಾವೀರ ಗೋ ಶಾಲೆಗೆ ಶಿಫ್ಟ್ ಮಾಡಲಾಗಿದೆ. ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಾಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.