ಮಂಗಳೂರು: ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ದಕ್ಷಿಣಕನ್ನಡದಲ್ಲಿ ಈ ಬಾರಿ ಗೆಲುವು ಸಾಧಿಸಲು ಕಾಂಗ್ರೆಸ್ ಭರ್ಜರಿ ಕಸರತ್ತು ನಡೆಸಿದೆ. ಅಭ್ಯರ್ಥಿಯನ್ನಾಗಿ ಕರಾವಳಿಯ ಬಹುಸಂಖ್ಯಾತ ಸಮುದಾಯವೆನಿಸಿರುವ ಬಿಲ್ಲವರ ಮುಖಂಡ ಪದ್ಮರಾಜ್ ರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದ್ದು ಲೋಕಸಭಾ ಚುನಾವಣಾ ಅಖಾಡ ಇದೀಗ ಕೌತುಕದ ರಣಾಂಗಣವಾಗಿ ಮಾರ್ಪಟ್ಟಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಮಂಜುನಾಥ್ ಭಂಡಾರಿ, ಅಶೋಕ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಸೇರಿದಂತೆ ಕಾಂಗ್ರೆಸ್ ನಾಯಕರನೇಕರ ಉಪಸ್ಥಿತಿಯಲ್ಲಿ ಶಕ್ತಿ ಪ್ರದರ್ಶನ ನಡೆಯಿತು. ಕರಾವಳಿ ದಸರಾದ ಕೇಂದ್ರಸ್ಥಾನವಾಗಿರುವ ಕುದ್ರೋಳಿ ದೇವಾಲಯದಿಂದ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಯಿತು. ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿಗೆ ವ್ಯಕ್ತಿತ್ವವೇ ವರದಾನ: ಜಿ.ಎ.ಬಾವಾ
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಈ ಬಾರಿ ದಕ್ಷಿಣಕನ್ನಡದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದರು. ಈ ಹಿಂದಿನ ಚುನಾವಣೆಗಳಲ್ಲಿ ಅಲ್ಪ ಸಂಖ್ಯಾತರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಾಗಿಲ್ಲ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವ ರೀತಿಯ ಉತ್ಸಾಹ ಕಂಡುಬಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮತದಾನವಾದರೆ ಕಾಂಗ್ರೆಸ್ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲಲಿದ್ದಾರೆ ಎಂದು ವಿಶ್ಲೇಷಿಸಿದರು.
ಈ ಬಾರಿ ಆಸ್ತಿಕರೂ ಆದ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಬಿಲ್ಲವ ಮುಖಂಡರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿದೆ. ಜನಾನುರಾಗಿಯಾಗಿರುವ ಪದ್ಮರಾಜ್ ಅವರು ಈವರೆಗೂ ಜಾತಿ-ಮತ-ಪಕ್ಷ ಭೇದವಿಲ್ಲದೆ ಸಾಮಾಜಿಕ ಕೆಲಸ ಮಾಡಿರುವವರು. ಈ ವ್ಯಕ್ತಿತ್ವದ ಕಾರಣದಿಂದಾಗಿ ಕರಾವಳಿಯ ಮತದಾರರಿಗೆ ಪದ್ಮರಾಜ್ ಅವರು ಪ್ರೀಯರೆನಿಸಿದ್ದಾರೆ ಎಂದು ಬಣ್ಣಿಸಿದ ಜಿ.ಎ.ಬಾವಾ, ಈ ಬಾರಿ ಕರಾವಳಿಯ ಜನರು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ
ಅತ್ತ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರೂ ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಸಹಿತ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ಮೆರವಣಿಗೆಯಲ್ಲಿ ತೆರಳಿ ಜಯಪ್ರಕಾಶ್ ಹೆಗ್ಡೆ ಅವರು ನಾಮಪತ್ರ ಸಲ್ಲಿಸಿದರು.