ಬೆಂಗಳೂರು: 2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷಾ ದಿನಾಂಕ ಮರು ನಿಗದಿಯಾಗಿದೆ. ಸೋಮವಾರದಿಂದಲೇ ಪರೀಕ್ಷೆ ನಡೆಸುವ ಬಗ್ಗೆ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಜ್ಞಾಪನ ಹೊರಡಿಸಿದೆ. ಪರೀಕ್ಷೆ ನಡೆಸುವ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳಿಗೆ ಮಾಹಿತಿ ರವಾನೆಯಾಗಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಪತ್ರಿಕಾ ಪ್ರಕಟಣೆ ಹೀಗಿದೆ:
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿದ್ದು, ಸದರಿ ದಾವೆಗಳನ್ನು ವಿಚಾರಣೆ ನಡೆಸಿ, ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಮೌಲ್ಯಾಂಕನವನ್ನು ಮುಂದುವರೆಸುವಂತೆ ನೀಡಿದ್ದ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ ಮತ್ತು ಪ್ರಕರಣವನ್ನು ರಾಜ್ಯ ಉಚ್ಚ ನ್ಯಾಯಾಲಯ ವಿಭಾಗೀಯ ಪೀಠಕ್ಕೆ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ದಿನಾಂಕ: 13-3-2024ರಿಂದ ನಡೆಯಬೇಕಾಗಿದ್ದ 5, 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿತ್ತು.
ಮುಂದುವರೆದು, ರಾಜ್ಯ ಘನ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಸದರಿ ದಾವೆಯ ಪ್ರಕರಣವನ್ನು ವಿಚಾರಣೆ ನಡೆಸಿ ದಿನಾಂಕ: 22-3-2024ರಂದು ಅಂತಿಮ ತೀರ್ಪು ನೀಡಿದ್ದು, 5, 8 ಮತ್ತು 9ನೇ ತರಗತಿಗಳ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ಕಾರ್ಯವನ್ನು ಉಳಿದ ವಿಷಯಗಳಿಗೆ ಮುಂದುವರೆಸಲು ಸೂಚಿಸಿ ಆದೇಶಿಸಿರುತ್ತದೆ. ಅದರಂತೆ ಸದರಿ ಮೌಲ್ಯಾಂಕನ ಕಾರ್ಯವನ್ನು ವಿದ್ಯಾರ್ಥಿಗಳ ಅಭ್ಯಾಸದ ಹಿತದೃಷ್ಟಿಯಿಂದ ದಿನಾಂಕ: 25-3-2024ರಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.