ಬೆಂಗಳೂರು : ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಶಸ್ತ್ರ ಪರವಾನಗಿ ಹೊಂದಿರುವ ಶಸ್ತ್ರ ಪರವಾನಗಿದಾರರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಆದೇಶಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಏಪ್ರೀಲ್ 26 ರಂದು ಜರುಗಲಿದ್ದು, ಮತ ಎಣಿಕೆಯು ಜೂನ್ 04 ರಂದು ನಡೆಯಲಿದೆ. ಈ ಚುನಾವಣೆಯ ಮಾದರಿ ನೀತಿ ಸಂಹಿತೆಯು ಮಾರ್ಚ್ 16 ರಿಂದ ಜಾರಿಯಲ್ಲಿರುತ್ತದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಚುನಾವಣೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲೆಯಾದ್ಯಂತ ಆಯುಧ ಕಾಯ್ದೆ 1959ರ ಕಲಂ (4), ಕಲಂ (21) ಮತ್ತು ಕಲಂ 24-ಎ(1) ರಡಿ ಆಯುಧ ಪರವಾನಗಿ ಹೊಂದಿದ ಎಲ್ಲಾ ಪರವಾನಗಿದಾರರು (ರಾಷ್ಟ್ರೀಕೃತ ಬ್ಯಾಂಕುಗಳನ್ನು ಹಾಗೂ ರಿಸರ್ವ್ ಬ್ಯಾಂಕ್ ಅವರಿಂದ ಅನುಮೋದಿಸಿದ ಶೆಡ್ಯೂಲ್ ಬ್ಯಾಂಕ್‌ಗಳ ಸೆಕ್ಯೂರಿಟಿ ಗಾರ್ಡಗಳ ಆಯುಧಗಳನ್ನು ಹೊರತುಪಡಿಸಿ) ಸದರಿ ಚುನಾವಣೆಯು ಶಾಂತಿಯುತವಾಗಿ ನಡೆಯಲು, ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಹಿತಾಸಕ್ತಿಗಳ ಅನುಗುಣವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಪರವಾನಗಿದಾರರ ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಲು ಹಾಗೂ ಸಿ.ಆರ್.ಪಿ.ಸಿ ಕಾಯ್ದೆ 1973 ಕಲಂ 144 ರಡಿ ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳದಲ್ಲಿ ಆಯುಧ ಶಸ್ತ್ರಾಸ್ತ್ರ ಮಾರಕಾಯುಧಗಳು, ಮದ್ದುಗುಂಡುಗಳನ್ನು ಹೊಂದುವುದು ಸಾಗಿಸುವುದು ಮತ್ತು ಬಳಸುವುದರ ಮೇಲೆ ನಿರ್ಬಂಧಗಳನ್ನು ವಿಧಿಸುವುದು ಅಗತ್ಯವಾಗಿರುತ್ತದೆ.. ಸಾರ್ವತ್ರಿಕ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ, ಚುನಾವಣಾ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಭಾರತೀಯ ಆಯುಧ ಕಾಯ್ದೆ 1959ರ ಕಲಂ (4), ಕಲಂ (21) ಮತ್ತು ಕಲಂ 24-ಎ(1) ರಡಿ ಅಧಿಕಾರವನ್ನು ಚಲಾಯಿಸುತ್ತಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಧಿಕೃತ ಪರವಾನಗಿ ಹೊಂದಿರುವ ಆಯುಧಗಳು, ಮದ್ದು-ಗುಂಡುಗಳು, ಬೆಂಕಿ ಉಗುಳುವ (Fire Arms), ಶಸ್ತ್ರಾಸ್ತ್ರಗಳು ಹಾಗೂ ಮಾರಕಾಸ್ತ್ರಗಳನ್ನು ಹೊಂದಿರುವ ಶಸ್ತ್ರ ಪರವಾನಗಿದಾರರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನು, ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಿಕೊಳ್ಳಲು ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಈ ಕೂಡಲೇ ಸೂಚನೆ ನೀಡಲು ಹಾಗೂ ತಮ್ಮ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎಲ್ಲಾ ಶಸ್ತ್ರ ಪರವಾನಗಿದಾರರಿಂದ ಆಯುಧಗಳನ್ನು ಪಡೆದು ಠಾಣೆಯಲ್ಲಿ ಠೇವಣಿ ಇರಿಸಿಕೊಂಡು ಸೂಕ್ತ ಸ್ವೀಕೃತಿ ನೀಡಿ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಶಸ್ತ್ರ ಪರವಾನಗಿದಾರರ ಪರವಾನಗಿ ಪುಸ್ತಕವನ್ನು ಪರಿಶೀಲಿಸಿ ಶಸ್ತ್ರ ಪರವಾನಗಿ ನವೀಕರಣ ಗೊಂಡಿರುವ ಬಗ್ಗೆ ಖಚಿತ ಪಡಿಸಿಕೊಂಡ ನಂತರವಷ್ಟೇ ಪರವಾನಗಿದಾರರಿಗೆ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ನಿರ್ದೇಶಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರಿಗೆ ಆದೇಶಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅಧೀನದಲ್ಲಿನ ಸಂಸ್ಥೆಗಳಲ್ಲಿ ಭದ್ರತೆಗಾಗಿ ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳಿಗೆ ಮಾತ್ರ ಈ ಮೇಲ್ಕಂಡ ಆದೇಶವು ಅನ್ವಯಿಸುವುದಿಲ್ಲ. ಉಳಿದಂತೆ ಭದ್ರತೆಗಾಗಿ ಪರವಾನಗಿ ಇಲ್ಲದ ಬ್ಯಾಂಕ್, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅಧೀನದಲ್ಲಿನ ಸಂಸ್ಥೆಗಳು ಕಡ್ಡಾಯವಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಿಕೊಳ್ಳಲು ತಿಳಿಸಿದೆ.
ಧಾರ್ಮಿಕ ಸಂಸ್ಥೆಗಳು, ಸರ್ಕಾರಿ, ಅರೆ ಸರ್ಕಾರಿ ಮತ್ತು ಸರ್ಕಾರೇತರ ಖಾಸಗಿ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧಗಳನ್ನು ಹೊಂದಿರುವವರು ಹಾಗೂ ವೈಯುಕ್ತಿಕವಾಗಿ ಜೀವ ಬೆದರಿಕೆ ಹೊಂದಿರುವವರು ಆಯುಧಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವ ಅನಿವಾರ್ಯತೆಗಳು ಇದ್ದಲ್ಲಿ ಇಂತಹ ಶಸ್ತ್ರ ಪರವಾನಿಗೆದಾರರು ತಮ್ಮ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು,
ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಎಲ್ಲಾ ಪೊಲೀಸ್ ಠಾಣಾಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು. ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾ ಸ್ಕ್ರೀನಿಂಗ್ ಕಮಿಟಿ ಸದಸ್ಯರಾದ ಜಿಲ್ಲಾ ಪೊಲೀಸ್ ಅಧೀಕ್ಷಕರು ಸದರಿ ಅರ್ಜಿಗಳನ್ನು ಕಮಿಟಿ ಮುಂದೆ ಮಂಡಿಸಿ ಅರ್ಜಿಗಳ ಅರ್ಹತೆಯ ಮೇರೆಗೆ ಪರಿಶೀಲಿಸಿ ಸಮಿತಿ ನಿರ್ಣಯದಂತೆ ವಿನಾಯಿತಿ ನೀಡುವ ಬಗ್ಗೆ ಕ್ರಮವಹಿಸಬೇಕು.
ಯಾವುದೇ ಪರವಾನಗಿದಾರರು ಚುನಾವಣಾ ಮಾದರಿ ನೀತಿ ಸಂಹಿತೆಯ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಠೇವಣಿ ಇರಿಸದೆ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಅನ್ವಯವಾಗಬಹುದಾದ ಎಲ್ಲಾ ಕಾಯ್ದೆಗಳನ್ವಯ ಕಾನೂನು ರೀತ್ಯಾ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದ್ದಾರೆ.
ಈ ಆದೇಶವು ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.