ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಮಾರ್ಚ್ 19 ಅಥವಾ 20 ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ. ನಾವು ಗೆಲ್ಲುತ್ತೇವೆ, ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಗ್ಯಾರಂಟಿ ಅನುಷ್ಠಾನ ಸಮಿತಿಗಳ ನಾಯಕರ ಸಭೆಯನ್ನು ಮಾರ್ಚ್ 21 ರಂದು ಕರೆಯಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಈ ಬಾರಿ ಬಿಜೆಪಿಯಿಂದ 20 ಸ್ಥಾನಗಳನ್ನು ಕಾಂಗ್ರೆಸ್ ಕಸಿದುಕೊಳ್ಳಲಿದೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.























































