ಶಿವಮೊಗ್ಗ: ಬಿಜೆಪಿ ನಾಯಕರ ವಿರುದ್ಧ ಬಂಡಾಯ ಎದ್ದಿರುವ ಕೆ.ಎಸ್. ಈಶ್ವರಪ್ಪ ಅವರನ್ನು ಮನವೊಲಿಸಲು ಪ್ರಧಾನಿ ಮೋದಿಯವರೇ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿದೆ.
ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಅಚ್ಚರಿಯ ಪ್ರಸಂಗ ನಡೆಯಿತು. ಸುದ್ದಿಗೋಷ್ಠಿಗೆ ಕುಳಿತುಕೊಂಡಿದ್ದೇ ತಡ, ಈಶ್ವರಪ್ಪ ಅವರ ಮೊಬೈಲ್ ರಿಂಗ್ ಆಗಿದೆ. ಕರೆ ಸ್ವೀಕರಿಸಿದ ಈಶ್ವರಪ್ಪ ಅವರಿಗೆ ನಾಳೆ ಮೋದಿ ಅವರು ನಿಮ್ಮ ನಿವಾಸಕ್ಕೆ ಭೇಟಿ ನೀಡುತ್ತಾರಾ ಎಂದು ಕೇಳಿದ್ದಾರೆ. ಇದಕ್ಕೆ, ಯಾರು ಹೇಳಿದ್ದು ಎಂದು ಈಶ್ವರಪ್ಪ ಪ್ರಶ್ನಿಸುತ್ತಾರೆ. ಟಿವಿಯಲ್ಲಿ ಆ ರೀತಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಈಶ್ವರಪ್ಪ, ಇಲ್ಲ ಬರುವುದಿಲ್ಲ ಎಂದಿದ್ದಾರೆ. ಒಂದು ವೇಳೆ ಮೋದಿ ನಿಮ್ಮ ನಿವಾಸಕ್ಕೆ ಬಂದರೆ ಹಾವೇರಿ ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಹೇಳುವಂತೆ ಮನವಿ ಮಾಡಿದರೆ ಏನು ಮಾಡ್ತೀರಿ ಎಂದು ಆ ವ್ಯಕ್ತಿ ಪ್ರಶ್ನಿಸಿದ್ದಾರೆ. ಆಗ ಮೋದಿ ನಮ್ಮ ಮನೆಗೆ ಬರುವುದಿಲ್ಲ, ಗ್ಯಾರಂಟಿ ಎಂದು ಹೇಳಿ ಈಶ್ವರಪ್ಪ ಅವರು ಫೋನ್ ಕಾಲ್ ಕಟ್ ಮಾಡಿದ್ದಾರೆ.