ಮಂಗಳೂರು: ದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರ ಎನಿಸಿರುವ ದಕ್ಷಿಣಕನ್ನಡ ಜಿಲ್ಲೆಯು ಹೇಳಿ-ಕೇಳಿ ಕೇಸರಿ ಪಾಳಯದ ಭದ್ರಕೋಟೆ. ಕಳೆದ ನಾಲ್ಕು ದಶಕಗಳಲ್ಲಿ ಹಿಂದೂತ್ವದ ಶಕ್ತಿಯಿಂದಲೇ ಗೆಲುವಿನ ಯಾತ್ರೆ ಕೈಗೊಂಡಿರುವ ಬಿಜೆಪಿಗೆ ಈ ಬಾರಿ ಹೊಸ ಅಭ್ಯರ್ಥಿ.
ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಹೈಕಮಾಂಡ್ ಮಂಗಳೂರು (ದಕ್ಷಿಣ ಕನ್ನಡ) ಲೋಕಸಭಾ ಕ್ಷೇತ್ರದಲ್ಲಿ ಅಗ್ನಿ ಪರೀಕ್ಷೆಗೆ ಇಳಿದಿದೆ. ಆದರೆ ಬ್ರಿಜೇಶ್ ಚೌಟ ಅಂದರೆ ಯಾರು? ಎಂಬ ಕುತೂಹಲ ಬಹುತೇಕ ಮಂದಿಯದ್ದು. ಬಿಜೆಪಿಯೊಳಗಿನ ಸೇನಾನಿಗಳಿಗೆ ಬ್ರಿಜೇಶ್ ಚೌಟರ ಬಗ್ಗೆ ತಿಳಿದಿರಬಹುದಾದರೂ ಕ್ಷೇತ್ರದ ಜನಸಾಮಾನ್ಯರಿಗೆ ಇವರು ಅಚ್ಚರಿಯ ಅಭ್ಯರ್ಥಿಯೇ..! ಚುನಾವಣಾ ಕಣದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೊಸ ಮುಖವೆನಿಸಿದರೂ ವಾಣಿಜ್ಯೋದ್ಯಮಿ, ಶಿಕ್ಷಣ ತಜ್ಞ ಮತ್ತು ಆಡಳಿತ ನಿರ್ವಹಣಾ ತಜ್ಞರಾಗಿ ಸಾರ್ವಜನಿಕವಾಗಿ ಹೆಸರನ್ನು ಗಳಿಸಿದವರು. ಈಗಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಸ್ನೇಹಿತ, ಪುತ್ತಿಲ ಪರಿವಾರಕ್ಕೂ ಪ್ರಿಯ, ಸತ್ಯಜಿತ್ ಸೈನ್ಯಕ್ಕೂ ಆಪ್ತರಾಗಿರುವ ಕ್ಯಾಪ್ಟನ್ ಇದೀಗ ಕರಾವಳಿಯ ಚುನಾವಣಾ ಕಣದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಅವಿವಾಹಿತರಾಗಿ ನಿರಂತರ ಜನಸೇವೆಯಲ್ಲೇ ತೊಡಗಿರುವ ಬ್ರಿಜೇಶ್ ಚೌಟ ಅವರು ಮೂಲತಃ ಸೇನಾಧಿಕಾರಿ. ಕರಾವಳಿಯ ಬಂಟ ಸಮುದಾಯದ ಪ್ರತಿಷ್ಠಿತ ಮನೆತನದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘದ ಸಿಪಾಯಿಯಾಗಿದ್ದ ಇವರು, ಕರಾವಳಿಯ ಯುವಜನರ ಪಾಲಿಗೆ ಕುತೂಹಲದ ಕೇಂದ್ರಬಿಂದು. ಮಾಜಿ ಸೈನಿಕರಾದರೂ ‘ಕ್ಯಾಪ್ಟನ್’ ಎಂದೇ ಗುರುತಾಗಿದ್ದಾರೆ.
ಮಂಗಳೂರಿನ ರಥಬೀದಿ ನಿವಾಸಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾಲೇಜು ದಿನಗಳಲ್ಲೇ ಅತ್ಯುತ್ತಮ NCC ಕೆಡೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ, ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಆಡಳಿತ ವ್ಯವಹಾರ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬಳಿಕ ಯುಪಿಎಸ್ಸಿ ಮೂಲಕ ರಕ್ಷಣಾ ಇಲಾಖೆಗೆ ಸೇರಿಕೊಂಡರು. ಭಾರತೀಯ ಸೇನೆಯ ಕ್ಯಾಪ್ಟನ್ ಆಗಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ರಾಜಕೀಯ ಪಟುವಷ್ಟೇ ಅಲ್ಲ, ಸೈದ್ದಾಂತಿಕ ಪುರೋಹಿತ..!
ಬಿಜೆಪಿಯಲ್ಲಿ ಇವರು ಹಿರಿಯ ನಾಯಕರೇನಲ್ಲ. ಆದರೂ ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸಂಘದ ಪ್ರೇರಣೆಯಿಂದ ಮುಂದೆ ಭಾರತೀಯ ಸೇನೆಗೆ ಸೇರಿ, ಸೇನಾ ನಿವೃತ್ತಿಯ ಬಳಿಕ ಮಂಗಳೂರಿಗೆ ಆಗಮಿಸಿದ ಬ್ರಿಜೇಶ್ ಚೌಟ, ಆರೆಸ್ಸೆಸ್ ನಲ್ಲಿ ಸಕ್ರಿಯರಾಗಿ, 2013ರಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡರು.2016ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯ ಮುಂಚೂಣಿ ಜವಾಬ್ಧಾರಿ ವಹಿಸಿಕೊಂಡರು. ಆರೆಸ್ಸೆಸ್ ಸಿದ್ದಾಂತದ ಪೌರೋಹಿತ್ಯ ವಹಿಸಿಕೊಂಡಂತೆ ಬಿಜೆಪಿಯ ಕಟ್ಟಾಳುವಾಗಿರುವ ಇವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪ್ರಭಾರಿಯಾಗಿ ಕಾರ್ಯನಿರ್ವಹಿಸಿ ಕಮಲ ಅಭ್ಯರ್ಥಿಯನ್ನು ಗೆಲ್ಲಿಸಿದ ಕೀರ್ತಿಗೆ ಪಾತ್ರರಾದರು. ಆ ಕಾರಣದಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಚೌಟರನ್ನು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಕರಾವಳಿಯಲ್ಲಿ ಪಕ್ಷ ಬಲಪಡಿಸುವ ಹೊಣೆ ವಹಿಸಿದರು.
ಕರಾವಳಿಯ ವಾಜಪೇಯಿ?
ಅವಿವಾಹಿತರಾಗಿ ಸಂಘ ಹಾಗೂ ಬಿಜೆಪಿಯ ಸೇನಾನಿಯಾಗಿರುವ ಇವರನ್ನು ಮತ್ತೊಬ್ಬ ವಾಜಪೇಯಿ ಎಂದೇ ಕಾರ್ಯಕರ್ತರು ಕರೆಯುತ್ತಿದ್ದಾರೆ. ಬಿಜೆಪಿಯ ಯುವ ಸಂವಾದ ಘಟಕದ ರಾಜ್ಯ ಸಹ ಸಂಚಾಲಕರಾಗಿ ಕೆಲಸ ಮಾಡಿ ಯುವಜನರ ನಡುವೆ ಸಂಘಟನಾ ಚತುರನೆನಿಸಿದ ಬ್ರಿಜೇಶ್ ಚೌಟ, ಮೆಟ್ರೋ ನಗರಗಳಿಗೆ ಸೀಮಿತವಾಗಿದ್ದ ‘ಲಿಟ್ ಫೆಸ್ಟ್’ ಎಂಬ ರಾಷ್ಟ್ರ ಮಟ್ಟದ ಸಾಹಿತ್ಯ ಕೂಟವನ್ನು ಮಂಗಳೂರಿನಲ್ಲಿ ಸಂಘಟಿಸಿ ಗಮನಸೆಳೆದರು. ಜೊತೆಗೆ ಸಮರ್ಥನ್ ಫೌಂಡೇಶನ್ ಮೂಲಕ ಕರಾವಳಿಯಲ್ಲಿ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿ ಜನಮಾನಸಕ್ಕೆ ಹತ್ತಿರವಾದವರು ಎಂಬುದು ಯುವಜನರ ಮಾತುಗಳು. 2015ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ಹೋರಾಟ ಸಂಘಟಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ನಗರದಲ್ಲೇ ಕಂಬಳ ಆಯೋಜಿಸಿ ಕರಾವಳಿ ಜನರ ಮನಗೆದ್ದಿದ್ದಾರೆ. ಏಳು ವರ್ಷಗಳಿಂದ ಕುಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿನ ಕಂಬಳದ ನೇತೃತ್ವ ವಹಿಸುತ್ತಿರುವ ಈ ಕ್ಯಾಪ್ಟನ್, ಕಂಬಳ ಬ್ರಿಜೇಶ್ ಚೌಟ ಎಂದೂ ಜನಜನಿತರಾಗಿದ್ದಾರೆ.
ಇದೆಲ್ಲವನ್ನೂ ಅಳೆದು ತೂಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನೇ ಕಮಲ ಭದ್ರಕೋಟೆಯಲ್ಲಿ ಕಮಲ ಪಕ್ಷ ಕಣಕ್ಕಿಳಿಸಿದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.