ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಮುಂದೆ ಯಾವುದೂ ನಡೆಯುವುದಿಲ್ಲ, ಬಿಜೆಪಿಯಲ್ಲಿ ಬಂಡಾಯ ಇರಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಕೇಂದ್ರದ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಟಿಕೆಟ್ ನಿರ್ಧಾರ ಅಂತಿಮಗೊಳ್ಳುತ್ತಿದೆ. ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಹಳೆ ಬೇರು ಹೊಸ ಚಿಗುರು ಎನ್ನುವುದು ಬಿಜೆಪಿಯ ಧರ್ಮ. ಟಿಕೆಟ್ ಸಿಗುವುದಿಲ್ಲವೆಂದು ಯಾರೂ ಊಹೆ ಮಾಡಿಕೊಂಡು ಮಾತನಾಡುವುದು ಬೇಡ ಎಂದರು.
28 ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಟಿಕೆಟ್ ನೀಡಲಾಗುತ್ತಿದೆ. ಹೃದಯರೋಗ ತಜ್ಞರಾದ ಡಾ.ಸಿ.ಎನ್.ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪಕ್ಷದ ಮಟ್ಟದಲ್ಲೂ ಚರ್ಚೆಯಾಗಿದೆ ಎಂದರು.
ಬಿಜೆಪಿಯಲ್ಲಿ ಹೆಚ್ಚು ಪ್ರಜಾಪ್ರಭುತ್ವವಿದ್ದು, ಇಲ್ಲಿ ಯಾರೂ ಬಂಡಾಯವೇಳುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಮುಂದೆ ಯಾವುದೂ ನಡೆಯುವುದಿಲ್ಲ. ಮ್ಯಾಚ್ ಆಡುವ ಮುನ್ನ ಕ್ಯಾಪ್ಟನ್ ಇರಬೇಕು. ಯುದ್ಧ ಮಾಡಲು ಕೂಡ ಸೇನಾಧಿಪತಿ ಬೇಕು. ಅದು ಯಾರೆಂದು ನಿರ್ಧರಿಸುವ ಯೋಗ್ಯತೆ ಕಾಂಗ್ರೆಸ್‌ಗಿಲ್ಲ. INDI ಅಲಯನ್ಸ್‌ನಲ್ಲಿ ಈಗ ದೊಡ್ಡ ನಾಯಕರಾರೂ ಇಲ್ಲ. ಎಕ್ಸ್ಟ್ರಾ ಪ್ಲೇಯರ್‌ಗಳು ಮಾತ್ರವಿದ್ದು, ಅವರನ್ನಿಟ್ಟುಕೊಂಡು ಮ್ಯಾಚ್ ಆಡಿದರೆ ಗೆಲ್ಲಲು ಸಾಧ್ಯವೇ ಎಂದು ಯೋಚಿಸಲಿ ಎಂದರು.






















































