ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕರಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು 1997ರಲ್ಲಿ ಜಾರಿಗೊಳಿಸಿದಾಗಿನಿಂದಲೂ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸೃಜಿಸಬೇಕು ಎನ್ನುವ ನಿಬಂಧನೆ ಕಾಯಿದೆಯಲ್ಲಿಯೇ ಅಡಕವಾಗಿದೆ. ಹೀಗಿದ್ದರೂ ಸಾಮಾನ್ಯ ಸಂಗ್ರಹಣಾ ನಿಧಿಯ ನಿಯಮಾವಳಿಗಳಲ್ಲಿ ಅಡಕವಾಗಿರುವ ಅಂಶಗಳಿಗೆ ವಿರುದ್ಧವಾಗಿ ಇಂತಹ ಆಪಾದನೆಗಳನ್ನು ಮಾಡಲಾಗುತ್ತಿರುವುದು ದುರುದ್ದೇಶದಿಂದ ಕೂಡಿರುವ ಷಡ್ಯಂತ್ರವಾಗಿದೆ ಎಂದು ಮುಜರಾಯಿ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಕಾಯ್ದೆ ತಿದ್ದುಪಡಿ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರವೇ ಬಳಸಲಾಗುತ್ತದೆ. ಈ ನಿಧಿಯು 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ ಧಾರ್ಮಿಕ ಕಾರ್ಯಗಳಿಗೆ ಮಾತ್ರವೇ ಬಳಕೆಯಾಗುತ್ತಿದ್ದು, ಭವಿಷ್ಯದಲ್ಲಿಯೂ ಅದಕ್ಕೆ ಮಾತ್ರವೇ ಬಳಕೆಯಾಗಲಿದೆ ಎಂದಿದ್ದಾರೆ.
ಇದೇ ವೇಳೆ, ದೇವಸ್ಥಾನಗಳ ಹಣ ಅಪಬಳಕೆ ಆರೋಪ ಬಗ್ಗೆ ಮುಜರಾಯಿ ಇಲಾಖೆ ಕೂಡಾ ಸ್ಪಷ್ಟನೆ ನೀಡಿದ್ದು, ಬೇರೆ ಯಾವುದೇ ಧರ್ಮದ ಜನರ ಅನುಕೂಲಕ್ಕಾಗಿ ದೇವಾಲಯಗಳ ಹಣವನ್ನು ಬಳಸಲಾಗುವುದಿಲ್ಲ. ದೇವಸ್ಥಾನಗಳ ಹಣವನ್ನು ಕೇವಲ ಹಿಂದೂ ಸಮುದಾಯದ ಏಳಿಗೆ ಮತ್ತು ಕಲ್ಯಾಣಕ್ಕೆ ಮಾತ್ರವೇ ಬಳಸಬೇಕೆನ್ನುವ ಬಾಧ್ಯತೆಯನ್ನು ಈ ನಿಧಿಯ ನಿಬಂಧನೆಗಳಲ್ಲಿ ಒತ್ತಿ ಹೇಳಲಾಗಿದೆ ಎಂದಿದೆ.
ಪ್ರಸ್ತುತ ತಿದ್ದುಪಡಿಗೂ ಮುನ್ನ ಈ ನಿಧಿಗೆ ಹಣವು ಈ ಕೆಳಗಿನ ಮಾರ್ಗಗಳಿಂದ ಬರುತ್ತಿತ್ತು:
ನಿವ್ವಳ ಆದಾಯ ಹತ್ತು ಲಕ್ಷ ರೂ. ಮೀರುವ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ.10;
ನಿವ್ವಳ ವಾರ್ಷಿಕ ಆದಾಯ ಐದು ಲಕ್ಷ ರೂ. ಗಿಂತ ಹೆಚ್ಚಿದ್ದು ಹತ್ತು ಲಕ್ಷ ರೂ. ಮೀರದ ದೇವಸ್ಥಾನಗಳ ವಾರ್ಷಿಕ ಆದಾಯದಿಂದ ಶೇ.5; ಹಾಗೂ
ರಾಜ್ಯ ಸರ್ಕಾರದಿಂದ ದೊರೆಯುತ್ತಿದ್ದ ಅನುದಾನ.
ತಿದ್ದುಪಡಿಯ ನಂತರ ಸಾಮಾನ್ಯ ಸಂಗ್ರಹಣಾ ನಿಧಿಗೆ ಹಣವು ಇದೇ ಮೂಲಗಳಿಂದ ಬರಲಿದೆ:
-
ಒಂದು ಕೋಟಿ ರೂ. ನಿವ್ವಳ ಆದಾಯ ಮೀರುವ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ. 10;
-
ಹತ್ತು ಲಕ್ಷ ರೂ ನಿವ್ವಳ ಆದಾಯಕ್ಕಿಂತ ಹೆಚ್ಚಿದ್ದು ರೂ. 1 ಕೋಟಿ ಮೀರದ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ.5 ಹಾಗೂ
-
ರಾಜ್ಯ ಸರ್ಕಾರದಿಂದ ದೊರೆಯುವ ಅನುದಾನ.
ಇದೇ ವೇಳೆ, ನೂತನ ತಿದ್ದುಪಡಿಯನ್ನು ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ ಎನ್ನುತ್ತಿರುವ ಧಾರ್ಮಿಕ ಮುಖಂಡರು, ಮುಜರಾಯಿ ಇಲಾಖೆಯಲ್ಲಿ ಪ್ರಸ್ತುತ ಕ್ರಾಂತಿಕಾರಿ ಬದಲಾವಣೆಯ ಪರ್ವ ಆರಂಭವಾಗಿದೆ ಎನ್ನುತ್ತಿದ್ದಾರೆ.
- ಕರ್ನಾಟಕ ಭಾರತ್ ಗೌರವ್ ಕಾಶಿ ಯಾತ್ರೆಯಲ್ಲಿ ಗಯಾ ಕ್ಷೇತ್ರ ಸೇರ್ಪಡೆ
- ಸಹಾಯ ಧನ ರೂ. 5,000/- ದಿಂದ ರೂ. 7,500/-ಕ್ಕೆ ಹೆಚ್ಚಳ
- ಊಟ ತಿಂಡಿಗಾಗಿ ಪ್ರತ್ಯೇಕ ವ್ಯವಸ್ಥೆ
- ವೈದ್ಯರ ಸೇವೆಗಾಗಿ ಪ್ರತ್ಯೇಕ ಬೋಗಿಯಲ್ಲಿ ವ್ಯವಸ್ಥೆ
ಪ್ರವರ್ಗ ‘ಸಿ’ ಅಧಿಸೂಚಿತ ದೇವಾಲಯ / ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು / ನೌಕರರಿಗೆ ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ಯೋಜನೆಯಡಿ ವರ್ಷದಲ್ಲಿ 1200 ಜನ ಅರ್ಚಕರು ಮತ್ತು ನೌಕರರಿಗೆ ಉಚಿತ ಯಾತ್ರೆ, ಸಾಮೂಹಿಕ ಮದುವೆಗಳಿಗೆ ಉತ್ತೇಜನ: ‘ಮಾಂಗಲ್ಯ ಭಾಗ್ಯ’ ಯೋಜನೆ: ಪ್ರವರ್ಗ `ಎ’ ಮತ್ತು `ಬಿ’ ಅಧಿಸೂಚಿತ ದೇವಾಲಯಗಳಲ್ಲಿ `ಮಾಂಗಲ್ಯ ಭಾಗ್ಯ’ ಯೋಜನೆ ಅಡಿ ಸಾಮೂಹಿಕ ವಿವಾಹಗಳ ಆಯೋಜನೆ. ಈ ಯೋಜನೆಯಡಿಯಲ್ಲಿ ವಧು-ವರರಿಗೆ ರೂ.55,000/-ಗಳ ಪ್ರೋತ್ಸಾಹ ಧನವನ್ನು ಆದಾಯ ಇರುವ ದೇವಾಲಯಗಳ ನಿಧಿಯಿಂದ ಬಳಸಿಕೊಳ್ಳಲಾಗುವುದು. ಆದಾಯ ಕಡಿಮೆ ಇರುವ ದೇವಾಲಯಗಳಲ್ಲಿ ರೂ.55,000/-ಗಳ ಪ್ರೋತ್ಸಾಹ ಧನವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ನೀಡಲಾಗುವುದು ಉತ್ತಮ ನಡೆಯಾಗಿದೆ ಎಂದು ದೇವಾಲಯ ಸಿಬ್ಬಂದಿ ಸಂತಸ ಹಂಚಿಕೊಂಡಿದ್ದಾರೆ.
ತಸ್ತಿಕ್ ಹಣ ಡಿಬಿಟಿ: ತಸ್ತಿಕ್ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಕಾಶಿ, ಚಾರ್ ಧಾಮ್ ಮತ್ತು ಮಾನಸ ಸರೋವರ ಯಾತ್ರಾರ್ಥಿಗಳಿಗೆ ಹೊಸ ಮೊಬೈಲ್ ಆಪ್ ಬಿಡುಗಡೆ ಮಾಡಲಾಗಿದೆ. ಸಹಾಯ ಧನ ಯಾತ್ರಾರ್ಥಿಗಳ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮೆಯಾಗುತ್ತಿದೆ. ಕಾಶಿ ಯಾತ್ರೆ – ರೂ. 5,000, ಚಾರ್ ಧಾಮ್ ಯಾತ್ರೆ – ರೂ. 20,000, ಮಾನಸ ಸರೋವರ ಯಾತ್ರೆ – ರೂ. 30,000 ಸಹಾಯ ಧನ ನೀಡಲಾಗುತ್ತಿದೆ ಎಂದು ಅಧಿಕಾರಿಗಳೂ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾನ್ಯ ಸಂಗ್ರಹಣಾ ನಿಧಿ: ದೇವಸ್ಥಾನಗಳ ನಿವ್ವಳ ಆದಾಯದ ಶೇ. 10ರಷ್ಟು ಸಾಮಾನ್ಯ ಸಂಗ್ರಹಣಾ ನಿಧಿಗೆ ಮೀಸಲಿಟ್ಟ ಹಣವನ್ನು ‘ಸಿ’ ದರ್ಜೆ ದೇವಸ್ಥಾನಗಳ ಅಭಿವೃದ್ಧಿಗಾಗಿ ಮತ್ತು ಅರ್ಚಕರು / ನೌಕರರು / ಆಗಮಿಕರ ಶ್ರೇಯೋಭಿವೃದ್ಧಿಗಾಗಿ ಬಳಕೆ ಮಾಡುತ್ತಿದೆ. ವಿದ್ಯಾಭ್ಯಾಸ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಅಧಿಸೂಚಿತ ದೇವಾಲಯ / ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು / ನೌಕರರ ಮಕ್ಕಳಿಗೆ ವಿದ್ಯಾಭ್ಯಾಸ ಪ್ರೋತ್ಸಾಹ ಧನ ಯೋಜನೆ ಪ್ರಾರಂಭವಾಗಿದೆ.
ವಿದ್ಯಾಭ್ಯಾಸ ಪ್ರೋತ್ಸಾಹ ಧನ:
-
ಪದವಿ ಪೂರ್ವ ಶಿಕ್ಷಣ (ಪಿಯುಸಿ) ರೂ. 5,000
-
ಐಟಿಐ/ಜೆಓಸಿ/ಡಿಪ್ಲೋಮ ರೂ. 5,000
-
ಪದವಿ ಶಿಕ್ಷಣ ರೂ. 7,000
-
ಸ್ನಾತಕೋತ್ತರ ಪದವಿ ಶಿಕ್ಷಣ ರೂ. 15,000
-
ಇತರೆ ವೈದ್ಯಕೀಯ ಕೋರ್ಸ್ಗಳು (ಆಯುರ್ವೇದಿಕ್ ಹೋಮಿಯೋಪಥಿ ಮತ್ತು ಯುನಾನಿ) ರೂ. 25,000
-
ತಾಂತ್ರಿಕ ಶಿಕ್ಷಣ (ಇಂಜಿನಿಯರಿಂಗ್) ರೂ. 25,000
-
ವೈದ್ಯಕೀಯ/ಡೆಂಟಲ್ ಶಿಕ್ಷಣ ರೂ. 50,000
-
ವಿದೇಶ ವ್ಯಾಸಂಗ ರೂ. 1,00,000 (ಒಂದು ಬಾರಿ ಮಾತ್ರ)
ಆರ್ಕಿಟೆಕ್ಚರಲ್ ಸಮಿತಿ ಪುರಾತನ ದೇವಾಲಯಗಳನ್ನು ಅಭಿವೃದ್ಧಿಪಡಿಸಲು 2003 ರಲ್ಲಿಯೇ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ 2023 ರಲ್ಲಿ ಪ್ರಥಮ ಬಾರಿಗೆ ‘ಆರ್ಕಿಟೆಕ್ಚರಲ್ ಸಮಿತಿ’ (Architectural Committee) ರಚನೆ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿನ ಅಧಿಸೂಚಿತ ದೇವಾಲಯ / ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು / ನೌಕರರು ಮೃತಪಟ್ಟಲ್ಲಿ, ಮೃತರ ಕುಟುಂಬಕ್ಕೆ ರೂ. 2 ಲಕ್ಷ ಪರಿಹಾರ ನೀಡಲಾಗುತ್ತಿದೆ. ದೇವಾಲಯಗಳ ಮಾಹಿತಿಗಳನ್ನು ಭಕ್ತಾದಿಗಳಿಗೆ / ಸಾರ್ವಜನಿಕರಿಗೆ ಒದಗಿಸಲು ಹಾಗೂ ದೇವಸ್ಥಾನಗಳಲ್ಲಿ ಸೇವೆಗಳನ್ನು, ತಂಗುವ ಕೊಠಡಿಗಳನ್ನು ಕಾಯ್ದಿರಿಸಲು ಹಾಗೂ ದರ್ಶನದ ಸಮಯದ ಕುರಿತು ಮಾಹಿತಿ ಪಡೆಯಲು ಹೊಸ ಮಾಹಿತಿ ಕೇಂದ್ರ ತೆರೆಯಲು ಕ್ರಮ ವಹಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ದರ್ಶನದಲ್ಲಿ ಪ್ರಥಮಾದ್ಯತೆ, ಶಿಶುಗಳಿಗೆ ಹಾಲುಣಿಸುವ ಕೊಠಡಿ, ಶುದ್ಧ ನೀರು, ಸ್ವಚ್ಛತೆ, ಭದ್ರತಾ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ, ಚಾಮುಂಡೇಶ್ವರಿ ದೇವಿ, ಹುಲಿಗೆಮ್ಮ ದೇವಿ ದೇವಸ್ಥಾನ, ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳ ಪ್ರಾಧಿಕಾರ ರಚನೆ ಮಾಡುವ ಮೂಲಕ ಮುಜರಾಯಿ ಕ್ಷೇತ್ರದಲ್ಲಿ ಕ್ರಾತಿಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದು ಧಾರ್ಮಿಕ ಕ್ಷೇತ್ರದ ಮಂದಿ ಹರ್ಷ ವ್ಯಕ್ತಪಡಿಸಿದ್ದಾರೆ.