ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರ ಯಾರಿಂದ ಸಾಧ್ಯವಾಯಿತು? ಈ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ. ತಮ್ಮ ಕಾರ್ಯಕರ್ತರ ಹೋರಾಟದ ಫಲವಾಗಿ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಬಿಜೆಪಿ ನಾಯಕರು ಹೇಳಿದರೆ, ರಾಜೀವ್ ಗಾಂಧಿಯವರು ಶಿಲಾನ್ಯಾಸ ನೆರವೇರಿಸಿ ಸೂಕ್ತ ವೇದಿಕೆ ಕಲ್ಪಿಸಿದ್ದರಿಂದಾಗಿ ಇಂದು ಭವ್ಯ ರಾಮಮಂದಿರ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ.
‘ರಾಮ ಮಂದಿರಕ್ಕಾಗಿ ನಮ್ಮವರು ಬೆವರು ಸುರಿಸಿದ್ದಷ್ಟೇ ಅಲ್ಲ, ನೆತ್ತರನ್ನೂ ಕೊಟ್ಟಿದ್ದಾರೆ, ಪ್ರಾಣವನ್ನೂ ಸಮರ್ಪಿಸಿದ್ದಾರೆ’ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಇದಕ್ಕೆ ಎದಿರೇಟು ನೀಡುತ್ತಿರುವ ಕಾಂಗ್ರೆಸ್ ನಾಯಕರು, ‘ನ್ಯಾಯಾಯಾಲಯದ ತೀರ್ಪನ್ನು ಕಾಡು ನೋಡೋಣ ಎಂದು ಆರಂಭದಿಂದಲೇ ನಾವು ಹೇಳಿದ್ದೆವು, ಈ ವಿಚಾರದಲ್ಲಿ ಹಿಂಸೆಯ ಹಾದಿ ಬೇಕಿರಲಿಲ್ಲ ಎಂದಿದ್ದಾರೆ. ಕೊನೆಗೂ ಮಂದಿರ ನಿರ್ಮಾಣ ಸಾಧ್ಯವಾಗಿರುವುದು ನ್ಯಾಯಾಲಯದ ತೀರ್ಪಿನಿಂದಾಗಿಯೇ ಹೊರತು ಬಿಜೆಪಿಯ ಹೋರಾಟದಿಂದ ಅಲ್ಲ’ ಎಂದು ಕೈ ನಾಯಕರು ಹೇಳುತ್ತಿದ್ದಾರೆ. ಇನ್ನೊಂದೆಡೆ, ‘ಮಂದಿರಕ್ಕಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಬೇರೆ ಪಕ್ಷದಲ್ಲಿದ್ದು ಕರಸೇವಕರ ಸಾವನ್ನು ಸಂಭ್ರಮಿಸಿದ್ದ ಅನೇಕ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿರುವ ಬಿಜೆಪಿ ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ತಟಸ್ಥ ಹಿಂದೂ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ‘ರಾಮ ಮಂದಿರ ನಿರ್ಮಾಣವಾಗಿರುವುದು ಕರಸೇವಕರ ತ್ಯಾಗದ ಫಲವೇ ಹೊರತು ಬಿಜೆಪಿ-ಕಾಂಗ್ರೆಸ್ ನಾಯಕರ ಪ್ರಯತ್ನದಿಂದ ಅಲ್ಲ’ ಎಂದು ಹಿಂದೂ ಕಾರ್ಯಕರ್ತರು ಹೇಳುತ್ತಿದ್ದಾರೆ.
ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್..!
ರಾಮ ಮಂದಿರ ನಮ್ಮದೇ ಪ್ರಯತ್ನದ ಫಲ ಎನ್ನುತ್ತಿರುವ ಕಾಂಗ್ರೆಸ್, ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಕಾಂಗ್ರೆಸ್, 1985-86ರಲ್ಲಿ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇ ರಾಜೀವ್ ಗಾಂಧಿ ಎಂದು ಬೊಟ್ಟು ಮಾಡಿದೆ. 1989ರಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ವಿಶ್ವ ಹಿಂದೂ ಪರಿಷತ್’ಗೆ ಅವಕಾಶ ಕಲ್ಪಿಸಿದವರು ರಾಜೀವ್ ಗಾಂಧಿ. ರಾಜೀವ್ ಗಾಂಧಿ ಅವರು ಮೊದಲ ಹೆಜ್ಜೆ ಇಡದೇ ಹೋಗಿದ್ದರೆ ಬಿಜೆಪಿಯವರಿಗೆ ಇದರ ಆಲೋಚನೆಯೇ ಬರುತ್ತಿರಲಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ದೂರದರ್ಶನದಲ್ಲಿ ರಾಮಾಯಣದ ಸೀರಿಯಲ್ ಪ್ರಸಾರ ಮಾಡಿ ಮನೆ-ಮನೆಯೂ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ರಾಮ ಮತ್ತು ಆತನ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ. ಆದರೆ ರಾಮನ ಹೆಸರೇಳಿಕೊಂಡೇ ರಾಜಕೀಯ ಆಶ್ರಯ ಹುಡುಕುವ ಬಿಜೆಪಿಗೆ ಸನ್ಮತಿ ದೇ ಭಗವಾನ್” ಎಂದು ಹೇಳಬೇಕಾಗಿ ಬಂದಿರೋದು ದುರಂತ ಎಂದು ಕಾಂಗ್ರೆಸ್ ಹೇಳಿದೆ.
🔹ಭಾರತದ ಹಳ್ಳಿ, ಹಳ್ಳಿಗಳಲ್ಲಿ ಲಕ್ಷಾಂತರ ರಾಮದೇಗುಲ ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ.
🔹ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧಿನಾಯಕರಾಗಿದ್ದರು.
🔹ನಾಥುರಾಮ್ ಗೂಡ್ಸೆ ಹಾರಿಸಿದ ಗುಂಡಿಗೆ ಎದೆ ಸೀಳಿ ಹುತಾತ್ಮರಾದಾಗ ಮಹಾತ್ಮ ಗಾಂಧೀಜಿ ಅವರು ಹೇಳಿದ ಕೊನೇ ಮಾತು ಹೇ ರಾಮ್! ಆಗ ಬಿಜೆಪಿ ಹುಟ್ಟೇ ಇರಲಿಲ್ಲ.…
— Karnataka Congress (@INCKarnataka) January 8, 2024
ಬಿಜೆಪಿ ಎದಿರೇಟು:
ಕಾಂಗ್ರೆಸ್ ಪಕ್ಷದ ಈ ಟ್ವೀಟ್’ಗೆ ತನ್ನದೇ ದಾಟಿಯಲ್ಲಿ ಉತ್ತರಿಸಿರುವ ಬಿಜೆಪಿ, ಹಳ್ಳಿ ಹಳ್ಳಿಗಳಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು ರಾಮ ಭಕ್ತರಿಂದ, ಆದರೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅದರಿಂದ ಬರುವ ಆದಾಯವನ್ನು ದೋಚಿದ್ದು ನೀವು ಎಂದಿದೆ. ಮಹಾತ್ಮಾ ಗಾಂಧಿಯವರ ರಾಮರಾಜ್ಯದ ಕಲ್ಪನೆಯನ್ನು ಮೂಲೆಗೆ ಸೇರಿಸಿದ್ದು ಕಾಂಗ್ರೆಸ್, ಆದರೆ ಇಂದು ರಾಮ ಮಂದಿರ ನಿರ್ಮಿಸಿ ಅವರ ಕಲ್ಪನೆಗೆ ಜೀವ ತುಂಬಿದ್ದು ಮೋದಿ ಸರ್ಕಾರ! ಎಂದಿರುವ ಬಿಜೆಪಿ, ರಾಮ ಮಂದಿರದ ಬೀಗ ತೆಗಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು ರಾಜೀವ್ ಗಾಂಧಿಯಾದರೆ, ರಾಮ ಮಂದಿರದ ವಿರುದ್ಧವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲು ಕಪಿಲ್ ಸಿಬಲ್‌ರನ್ನು ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದೆ.
ಸ್ವಾತಂತ್ರ್ಯ ದೊರಕಿದಾಗಿನಿಂದ ರಾಮ ಮಂದಿರದ ಕಲ್ಪನೆ ದೇಶದ ಜನರಲ್ಲಿತ್ತು, ಅಂದಿನಿಂದ ಇಂದಿನವರೆಗೂ ನಿರ್ಮಾಣವಾಗದ ರಾಮ ಮಂದಿರ ನಿಮ್ಮ ರಾಜೀವ್ ಗಾಂಧಿ ಕಾಲಘಟ್ಟದಲ್ಲಿ ಯಾಕೆ ಆಗಲಿಲ್ಲ? ತಡೆದವರು ಯಾರು? ರಾಮ ಮತ್ತು ರಾಮನ ಆದೇಶವನ್ನು ಪಾಲಿಸುತ್ತಾ ಬಂದಿದ್ದರೆ ಕಾಂಗ್ರೆಸ್ ಪಕ್ಷ ರಾಮನನ್ನು ಕೇವಲ ಕಾಲ್ಪನಿಕ ಎಂದು ಏಕೆ ವ್ಯಂಗ್ಯ ಮಾಡುತ್ತಿತ್ತು ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿರುವ ಬಿಜೆಪಿ, ಕಳೆದ 70 ವರ್ಷಗಳಿಂದಲೂ ಹಿಂದುಗಳ ಆದರ್ಶ ಪುರುಷನಾದ ಶ್ರೀ ರಾಮನ ಮಂದಿರ ನಿರ್ಮಾಣ ಮಾಡಲು ಮೀನಾಮೇಷ ಎಣಿಸಿದ್ದು ಕಾಂಗ್ರೆಸ್ಸಿನಿಂದ ಜನರ ನಂಬಿಕೆಗೆ ಆದ ದುರಂತ ಎಂದು ದೂರಿದೆ. ರಾಮಾಯಣ ಹೇಗೆ ಜನರ ಮನದಲ್ಲಿದೆಯೋ ಹಾಗೆಯೇ ಕಾಂಗ್ರೆಸ್ಸಿಗರ ಸುಳ್ಳಿನ ಸರಪಳಿ ದೇಶದ ಜನತೆಯ ಮನಸ್ಸಿನಲ್ಲಿ ಆಳವಾಗಿದೆ ಎಂದು ಬಿಜೆಪಿ ವಿಶ್ಲೇಷಿಸಿದೆ.
ಹಳ್ಳಿ ಹಳ್ಳಿಗಳಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು ರಾಮ ಭಕ್ತರಿಂದ, ಆದರೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅದರಿಂದ ಬರುವ ಆದಾಯವನ್ನು ದೋಚಿದ್ದು ನೀವು!
ಮಹಾತ್ಮಾ ಗಾಂಧಿಯವರ ರಾಮರಾಜ್ಯದ ಕಲ್ಪನೆಯನ್ನು ಮೂಲೆಗೆ ಸೇರಿಸಿದ್ದು ಕಾಂಗ್ರೆಸ್, ಆದರೆ ಇಂದು ರಾಮ ಮಂದಿರ ನಿರ್ಮಿಸಿ ಅವರ ಕಲ್ಪನೆಗೆ ಜೀವ ತುಂಬಿದ್ದು ಮೋದಿ ಸರ್ಕಾರ!
— BJP Karnataka (@BJP4Karnataka) January 9, 2024
‘ನಮ್ಮೊಳಗಿನ ರಾಮ’ ಎಂದ ಕೈ ನಾಯಕ..!
ಇದೆಲ್ಲದರ ನಡುವೆ, ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಕರ್ನಾಟಕದ ಎಲ್ಲಾ ಮುಜರಾಯಿ ದೇಗಲಗಳಲ್ಲಿ ವಿಶೇಷ ಪೂಜೆ ನೆರವೇರಿಸುವಂತೆ ನಿರ್ದೇಶನ ನೀಡಿರುವ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಕ್ರಮವನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ರಾಮಲಿಂಗ ರೆಡ್ಡಿ ಅವರನ್ನು ಕಾಂಗ್ರೆಸ್ ವಕ್ತಾರರು ‘ನಮ್ಮೊಳಗಿನ ರಾಮ’ ಎಂದು ಬಣ್ಣಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ‘ನಮ್ಮೊಳಗಿನ ರಾಮ! ಜನವರಿ 22ರ ವಿಶೇಷ ದಿನ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಅನುವು ಮಾಡುವ ಮೂಲಕ ಸಚಿವ ರಾಮಲಿಂಗಾರೆಡ್ಡಿ ನಮ್ಮೊಳಗಿನ ರಾಮನಾಗಿದ್ದಾರೆ’ ಎಂದು ಶ್ಲಾಘಿಸಿದ್ದಾರೆ. ಶ್ರೀರಾಮನ ತತ್ವದಂತೆ ಸರ್ವ ಜನರ ಭಾವನೆಗಳ ಗೌರವಿಸುವುದು ನಮ್ಮ ಸಿದ್ಧಾಂತ ಆಗಿದ್ದು ಧರ್ಮದ ಹೆಸರಲ್ಲಿ ರಾವಣಾಸುರರ ವಿಜೃಂಭಣೆ ಬೇಡ!’ ಎಂದು ಅವರು ಹಾಕಿರುವ ಪೋಸ್ಟ್ ಗಮನಸೆಳೆದಿದೆ.
ನಮ್ಮೊಳಗಿನ ರಾಮ!
ಜನವರಿ 22ರ ವಿಶೇಷ ದಿನ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಅನುವು ಮಾಡುವ ಮೂಲಕ ಸಚಿವ ರಾಮಲಿಂಗಾರೆಡ್ಡಿ ನಮ್ಮೊಳಗಿನ ರಾಮನಾಗಿದ್ದಾರೆ
ಶ್ರೀ ರಾಮನ ತತ್ವದಂತೆ ಸರ್ವ ಜನರ ಭಾವನೆಗಳ ಗೌರವಿಸುವುದು ನಮ್ಮ ಸಿದ್ಧಾಂತ ಆಗಿದ್ದು ಧರ್ಮದ ಹೆಸರಲ್ಲಿ ರಾವಣಾಸುರರ ವಿಜೃಂಭಣೆ ಬೇಡ! #society #media #Karnataka #India pic.twitter.com/KfnzCDANI9— Ramesh Babu (@RameshBabuKPCC) January 9, 2024







































































ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್..!