ದೊಡ್ಡಬಳ್ಳಾಪುರ: ಅರಳುಮಲ್ಲಿಗೆ ಕೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ, ಆರೋಪಿಗಳಿಂದ ಬೇಟೆಯಾಡಿದ ಮೂರು ನವಿಲುಗಳು, ನಾಡ ಬಂದೂಕು ಮತ್ತು ಟಿವಿಎಸ್ ಮೊಪೇಡ್ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ನವಿಲು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಮುನಿಕೃಷ್ಣ ನೇತೃತ್ವದಲ್ಲಿ ಬಂಧಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಪುಟ್ಟಪರ್ತಿ ಟೌನ್ ನಿವಾಸಿಗಳಾದ ಶ್ರೀನಿವಾಸ, ಬಾಲಾಜಿ ಎಂದು ಗುರುತಿಸಲಾಗಿದೆ. ಆರೋಪಿ ಶ್ರೀನಿವಾಸ ಎಂಬಾತ ಜಾಲಿಗೆ ಶಿವಣ್ಣ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೊಬ್ಬ ಆರೋಪಿ ಬಾಲಾಜಿ, ಅರಳುಮಲ್ಲಿಗೆಯ ವೆಂಕಟೇಶ್ ಎಂಬುವರ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


























































