ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ಬಸ್ ಪ್ರಯಾಣ ಸೌಲಭ್ಯದ ‘ಶಕ್ತಿ’ ಯೋಜನೆಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಜೂನ್.11ರಿಂದ ಆರಂಭಗೊಂಡ ಈ ಯೋಜನೆಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೂ ಆದಾಯ ಹೆಚ್ಚಾಗಿದೆ.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಫಲಪ್ರದವಾಗಿ ಜಾರಿಗೆ ಪ್ರಯತ್ನ ನಡೆಸಿರುವ ಸಾರಿಗೆ ಸಂಸ್ಥೆಯ ಅಧಿಕಾರಿ, ನೌಕರರು, ಚಾಲನಾ ಸಿಬ್ಬಂದಿಗೆ ಕೆಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂಬಂಧ ನಿಗಮದ ಅಧಿಕಾರಿಗಳು ಹಾಗೂ ನೌಕರರಿಗೆ ಪತ್ರ ಬರೆದಿರುವ ವಿ.ಅನ್ಬುಕುಮಾರ್, ರಾಜ್ಯ ಸಬಲೀಕರಣದೆಡೆಗಿನ ಕಾರ್ಯಕ್ರಮವಾದ ‘ಶಕ್ತಿ’ ಯೋಜನೆಗೆ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು 11.06.2023ರಂದು ಚಾಲನೆ ನೀಡಿದರು. ಈ ಯೋಜನೆ ಜಾರಿಯಾದ ದಿನದಿಂದ ಈವರೆಗೆ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಸಾರಿಗೆ ಸೇವೆಯನ್ನು ಒದಗಿಸಲು ನಿಗಮದ ಸಮಸ್ತ ಚಾಲನಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿ ವರ್ಗ ಹಗಲಿರುಳು ಶ್ರಮಿಸಿ ಕರ್ತವ್ಯ ನಿಷ್ಠೆ ಮತ್ತು ಕಾರ್ಯತತ್ಪರತೆಯಿಂದ ಈ ಯೋಜನೆಯ ಅಭೂತಪೂರ್ವ ಯಶಸ್ವಿಗೆ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ನಿಗಮದಲ್ಲಿ ಹೊಸ ಬಸ್ಸುಗಳು ಸೇರ್ಪಡೆಯಾಗಿಲ್ಲ ಹಾಗೂ ಚಾಲನಾ, ತಾಂತ್ರಿಕ ಸಿಬ್ಬಂದಿ ನೇಮಕಾತಿಯ ಕೊರತೆ ಇದ್ದಾಗ್ಯೂ ಸಹ, ಯಾವುದೇ ಬಸ್ಸುಗಳು ತಾಂತ್ರಿಕ ದೋಷದಿಂದ ಮಾರ್ಗ ಮಧ್ಯದಲ್ಲಿ ನಿಲುಗಡೆಯಾಗದೆ, ಚಾಲನಾ ಸಿಬ್ಬಂದಿಗಳ/ ತಾಂತ್ರಿಕ ಸಿಬ್ಬಂದಿಗಳು ರಜೆಗೂ ಆದ್ಯತೆ ನೀಡದೆ, ತಾವೆಲ್ಲರೂ ತಂಡವಾಗಿ ಕರ್ತವ್ಯ ನಿರ್ವಹಿಸಿ, ಅತ್ಯುತ್ತಮ ಕಾರ್ಯಾಚರಣೆಯಿಂದ ಸರ್ಕಾರಕ್ಕೆ ಹಾಗೂ ಸಂಸ್ಥೆಗೆ ಗೌರವ ಮತ್ತು ಹೆಮ್ಮೆಯನ್ನು ತಂದಿರುತ್ತೀರಿ. ಇದಕ್ಕೆ ಅಭಾರಿಯಾಗಿದ್ದೇನೆ ಎಂದಿದ್ದಾರೆ.
ಅಂತರ ನಿಗಮ ವರ್ಗಾವಣೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ. pic.twitter.com/HVkgHUgCfX
— KSRTC (@KSRTC_Journeys) July 4, 2023
ಹಬ್ಬ, ಜಾತ್ರೆ, ಇತರೆ ವಿಶೇಷ ದಿನಗಳು ಸೇರಿದಂತೆ ಜನಸಂದಣಿ ಇರುವ ದಿನಗಳಂದು ಪ್ರಮುಖವಾಗಿ ಶುಕ್ರವಾರ ದಿಂದ ಭಾನುವಾರದವರೆಗೆ ತಮ್ಮ ವಿಭಾಗ, ಘಟಕದ ವ್ಯಾಪ್ತಿಯಲ್ಲಿನ ಬಸ್ ನಿಲ್ದಾಣಗಳಿಗೆ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಿ, ಬಸ್ಸುಗಳ ಟ್ರಿಪ್‌ಗಳನ್ನು ಜನಸಂದಣಿಗನುಗುಣವಾಗಿ ಹೆಚ್ಚಿಸಿ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಡೆಸಿ, ಕೆಲವೊಂದು ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತ್ತಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ ಈ ಯೋಜನೆಯನ್ನು ಸಾಕಾರಗೊಳಿಸುತ್ತಿರುವ ತಮ್ಮೆಲ್ಲರ ಶ್ರದ್ಧಾಪೂರ್ವಕ ಬರೆದಿದೆ ಎಂದು ಹೇಳಿದ್ದಾರೆ.
ಯೋಜನೆಯ ಯಶಸ್ಸಿಗೆ ಮುನ್ನುಡಿ ತಮ್ಮ ಈ ಕಾರ್ಯಯೋಜನೆಯನ್ನು ಮುಂದುವರೆಸಿ, ಕಟ್ಟುನಿಟ್ಟಾಗಿ ಬಸ್ಸುಗಳ ಕಾರ್ಯಾಚರಣೆಯನ್ನು ನಡೆಸಿ, ಕರ್ನಾಟಕ ಸಾರಿಗೆಯು ಜನರ ಜೀವನಾಡಿ ಎಂಬುದನ್ನು ಸಾಬೀತುಪಡಿಸುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೆಸ್ಸಾರ್ಟಿಸಿ ಎಂಡಿ ವಿ.ಅನ್ಬುಕುಮಾರ್, ನಮ್ಮ ಈ ಶಕ್ತಿಯುತ ಪಯಣದ ರೂವಾರಿಗಳಾದ ಪ್ರಯಾಣಿಕರಿಗೆ ಸಮರ್ಪಕ ಸೇವೆಯನ್ನು ಒದಗಿಸುವ ಸಂಕಲ್ಪ ನಮ್ಮದಾಗಿದೆ. ಮುಂಬರುವ ದಿನಗಳಲ್ಲಿಯೂ ಸಹ ತಾವುಗಳು ನಮ್ಮೊಂದಿಗೆ ಕೈಜೋಡಿಸುವ ಭರವಸೆ ಮತ್ತು ನಂಬಿಕೆಯನ್ನು ಸದಾ ಹೊಂದಿದ್ದೇನೆ ಎಂದಿದ್ದಾರೆ.