ಬೆಂಗಳೂರು: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಮೂಲಕ ಆಗಸ್ಟ್ ನಿಂದ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಪ್ರತ್ಯೇಕ ಅಪ್ ಸಿದ್ಧವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ದದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನೀಡಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಶಕ್ತಿ ಯೋಜನೆ ಜಾರಿ ಆಗಿದೆ.ಶಕ್ತಿ ಯೋಜನೆ ಜಾರಿಯಾದ ಒಂದು ವಾರದಲ್ಲಿ 3.30 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರಗಳಲ್ಲಿ ಜನ ತೀರ್ಥಯಾತ್ರೆ ಮಾಡುತ್ತಿದ್ದಾರೆ. ಆಮೂಲ ಧರ್ಮ ಉಳಿಸುವ ಕೆಲಸ ಆಗುತ್ತಿದೆ ಎಂದರು.
ಗೃಹಜ್ಯೋತಿ ಯೋಜನೆ ನೋಂದಣಿ ಆರಂಭವಾಗಿದೆ. ನೀವೆಲ್ಲರೂ ತಾಳ್ಮೆಯಿಂದ ನೋಂದಣಿ ಮಾಡಿಕೊಳ್ಳಿ, ಆತುರ, ಗಾಬರಿ ಬೇಡ. ನಿಮಗೆಲ್ಲರಿಗೂ ಈ ಯೋಜನೆ ಸಿಗಲಿದೆ ಎಂದ ಡಿಕೆಶಿ, ಆತುರದಿಂದ ತಾಂತ್ರಿಕ ತೊಂದರೆ ಆಗಬಾರದು ಎಂದು ಗೃಹಲಕ್ಷ್ಮಿ ಯೋಜನೆಯನ್ನು ಕಾಲಾವಕಾಶ ಪಡೆದು ಜಾರಿ ಮಾಡಲಾಗುವುದು ಎಂದರು.
ಬಾಪು ಕೇಂದ್ರ, ಪಂಚಾಯ್ತಿ ಕೇಂದ್ರ ಹಾಗೂ ಸ್ವಂತ ಮೊಬೈಲ್ ನಲ್ಲಿ ಅರ್ಜಿ ತುಂಬಲು ಅವಕಾಶ ಕಲ್ಪಿಸಲಾಗುತ್ತಿದೆ.ಇದರ ಜೊತೆಗೆ ಪಕ್ಷದ ಕಾರ್ಯಕರ್ತರು ಜನಪ್ರತಿನಿಧಿಗಳು ಮನೆ ಮನೆಗೆ ಹೋಗಿ ಪಕ್ಷಬೇಧ ಮರೆತು ಈ ಯೋಜನೆ ಅರ್ಜಿ ತುಂಬಬೇಕು. ಪ್ರತಿ ಬೂತ್ ಮಟ್ಟದಲ್ಲಿ ಓರ್ವ ವಿದ್ಯಾವಂತ ಮಹಿಳೆ ಹಾಗೂ ಪುರುಷ ಪ್ರತಿ ಮನೆಗೆ ಹೋಗಿ ಅರ್ಜಿ ತುಂಬಬೇಕು. ಯಾರೂ ಅರ್ಜಿ ತುಂಬಲು ಲಂಚ ಪಡೆಯಬಾರದು. ಲಂಚ ಪಡೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಮ್ಮ ಕಾರ್ಯಕರ್ತರು ಅಕ್ರಮದಲ್ಲಿ ಭಾಗಿಯಾದರೂ ಪ್ರಕರಣ ದಾಖಲಿಸಲಾಗುವುದು. ಎಷ್ಟು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಯೋಜನೆ ಜಾರಿ ಮಾಡಲು ಸಾಧ್ಯವೋ ಅಷ್ಟು ಪಾರದರ್ಶಕವಾಗಿ ಮಾಡಲಾಗುವುದು ಎಂದವರು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಆಗಸ್ಟ್ ನಿಂದ ಹಣ ನೀಡಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಅಪ್ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಈ ಯೋಜನೆಗೆ ನೋಂದಣಿ ಆರಂಭವಾಗಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ನೋಂದಣಿ ಆರಂಭದ ದಿನಾಂಕ ಪ್ರಕಟಿಸಲಿದ್ದಾರೆ ಎಂದು ಡಿಕೆಶಿ ತಿಳಿಸಿದರು.
























































