ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾರಾಂತ್ಯದ ದಿನವಾದ ಭಾನುವಾರ ಭಾರೀ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ಸಂಜೆ ಸುರಿದ ಬಿರುಗಾಳಿ ಮಳೆಗೆ ಜನ ಪರದಾಡುವಂತಾಯಿತು.
ಆಲಿಕಲ್ಲು ಮಳೆ ಸುರಿದಿದ್ದು, ಬಿರುಗಾಳಿ ಮಳೆಯ ಹೊಡೆತಕ್ಕೆ ಸಿಲುಕಿ ಅನೇಕ ಮರಗಳು ಧರೆಗರುಳಿವೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೂ ಮರದ ಕೊಂಬೆಗಳು ಬಿದ್ದಿವೆ. ಈ ಸರಣಿ ಘಟನೆಗಳಿಂದಾಗಿ ಅನೇಕ ವಾಹನಗಳು ಹಾನಿಗೊಳಗಾಗಿವೆ.
ಇದೇ ವೇಳೆ ಬೆಂಗಳೂರಿನ ಕೆ.ಆರ್.ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ಕಾರು ಮಳೆನೀರಲ್ಲಿ ಮುಳುಗಿ ಘೋರ ದುರಂತವೇ ಘಟಿಸಿದೆ. ಅಂಡರ್‌ಪಾಸ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಷಿ ಮುಳುಗಿದೆ. ಇದನ್ನು ಕಂಡ ಸಾರ್ವಜನಿಕರು ಕೂಡಲೇ ಕಾರ್ಯಪ್ರವೃತ್ತರಾಗಿ ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾದರು. ಅಗ್ನಿಶಾಮಕದಳದ ಸಿಬ್ಬಂದಿ ಸಹಾಯದಿಂದ ಕಾರಿನಲ್ಲಿದ್ದವರನ್ಬು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದ್ದರಿಂದ ಈ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.
ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ಸಿಎಂ ಸಿದ್ದರಾಮಯ್ಯ ಮೃತ ಯುವತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದರು. ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದುದರಿಂದ ಯುವತಿ ಮೃತಪಟ್ಟಿದ್ದಾರೆ ಎಂಬ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.