ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಜನತೆಗೆ ಅಭಿನಂದನೆ ಸಲ್ಲಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈಗಾಗಲೇ ನಾವು ಏನು 5 ಗ್ಯಾರೆಂಟಿಗಳನ್ನು ನೀಡಿದ್ದೇವೆ ಅದನ್ನು ಮೊದಲ ಸಂಪುಟ ಸಭೆಯಲ್ಲೇ ಆದೇಶ ಹೊರಡಿಸಿ ಜಾರಿಗೆ ಕೊಡುತ್ತೇವೆ ಎಂದರು.
ನರೇಂದ್ರ ಮೋದಿ ಅವರು ಈ ಗ್ಯಾರೆಂಟಿಗಳನ್ನು ಜಾರಿ ಮಾಡಲು ಆಗಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಸಾಲ ಮಾಡಿ ದೇಶವನ್ನು ದಿವಾಳಿ ಮಾಡಿರುವುದು ಮೋದಿ ಅವರೇ. ರಾಜ್ಯವನ್ನು ಕೂಡ ದಿವಾಳಿ ಮಾಡಿರುವುದು ಬಿಜೆಪಿಯವರು. 53 ಲಕ್ಷ ಕೋಟಿ ಇದ್ದ ದೇಶದ ಸಾಲ ಇಂದು 155 ಲಕ್ಷ ಕೋಟಿ ಆಗಿದೆ. ರಾಜ್ಯದ ಮೇಲಿದ್ದ ಸಾಲ 2 ಲಕ್ಷದ 42 ಸಾವಿರ ಕೋಟಿ ಇಂದು 5 ಲಕ್ಷದ 64 ಸಾವಿರ ಕೋಟಿ ಆಗಿದೆ. ಸಾಲ ಮಾಡಿ ದೇಶವನ್ನು ಮತ್ತು ರಾಜ್ಯವನ್ನು ದಿವಾಳಿ ಮಾಡಿದವರು ಯಾರು ಮೋದಿಜೀ? ಇದಕ್ಕೆ ನಾನು ನರೇಂದ್ರ ಮೋದಿ ಅವರು ನೂರು ಬಾರಿ ರಾಜ್ಯಕ್ಕೆ ಬಂದರೂ ಏನು ಉಪಯೋಗ ಆಗಲ್ಲ ಎಂದು ಹೇಳಿದ್ದೆ. ಅವರು ಸುಳ್ಳು ಹೇಳಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ನಾಡಿನ ಮಹಿಳೆಯರು, ರೈತರು, ಬಡವರ ಹೀಗೆ ಇಲ್ಲಿನ ಜನರಿಗೆ ಸಂಬಂಧಿಸಿದ ವಿಚಾರಗಳನ್ನು ಬಿಟ್ಟು ಬೇರೆ ವಿಚಾರಗಳನ್ನು ಮಾತನಾಡಿದರೆ ಯಾರು ಕೇಳುತ್ತಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿದ್ದಾರೆ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸುತ್ತೇನೆ. ಈ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರು ಕಾರ್ಯತಂತ್ರ ರೂಪಿಸುವುದು, ಪ್ರಚಾರ ಮಾಡುವುದು, ಕೆಲವೊಮ್ಮೆ ಬಿಜೆಪಿಯವರ ಜೊತೆ ಜಗಳವನ್ನು ಮಾಡಿದ್ದಾರೆ. ಇವರೆಲ್ಲರಿಗೂ ವಿಶೇಷವಾಗಿ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದರು.






















































