ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಹಾಗೂ ಶಾಸಕ ಯು.ಟಿ. ಖಾದರ್ ಗುರುವಾರ ನಾಮಪತ್ರ ಸಲ್ಲಿಸಿದರು.
ಕಾರ್ಯಕರ್ತರು ಪಕ್ಷದ ಮುಖಂಡರು ಮೆರವಣಿಗೆಯಲ್ಲಿ ಸಾಗಿ ಉಳ್ಳಾಲ ನಗರಸಭೆ ಕಾರ್ಯಾಲಯದಲ್ಲಿರುವ ಚುನಾವಣಾಧಿಕಾರಿ ಕೆ.ರಾಜು ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊಲದು ಅವರು ಸೋಮೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾ ಸಹಿತ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದರು. ಬಳಿಕ ಆಯೋಜಿಸಿದ್ದ ಕಾರ್ಯಕರ್ತರ ಬಹಿರಂಗ ಸಭೆಯಯಲ್ಲಿ ಮಾತನಾಡಿದ ಯು.ಟಿ.ಖಾದರ್, ಇದು ಸತ್ಯ ಧರ್ಮದ, ಅನ್ಯಾಯದ ವಿರುದ್ಧದ ನ್ಯಾಯದ ಚುನಾವಣೆ ಆಗಿದೆ. ಜನ ವಿರೋದಿ, ತಾರತಮ್ಯ ಮಾಡುವ ಸರ್ಕಾರವನ್ನು ಕೆಳಗಿಸುವ ಚುನಾವಣೆ ಆಗಿದೆ ಎಂದರು.

ಹಲವು ಧರ್ಮ, ಜಾತಿಯ ಜನರ ನಡುವೆ ಸೌಹಾರ್ದದ ಕೊಂಡಿಯಾಗಿ ಕಾರ್ಯನಿರ್ವಹಿಸಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ತೃಪ್ತಿ ಇದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಮತ್ತೊಮ್ಮೆ ಗೆದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದರು.
ಸಮಾವೇಶದ ಬಳಿಕ ಅಬ್ಬಕ್ಕ ವೃತ್ತದವರೆಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಯು.ಟಿ.ಖಾದರ್ ನಾಮಪತ್ರ ಸಲ್ಲಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಇಬ್ರಾಹೀಂ ಕೋಡಿಜಾಲ್, ಡಾ.ಕಣಚೂರು ಮೋನು, ಹರ್ಷರಾಜ್ ಮುದ್ಯ, ದಿನೇಶ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮುಖಂಡರಾದ ರಾಕೇಶ್ ಮಲ್ಲಿ, ಈಶ್ವರ್ ಉಳ್ಳಾಲ್, ಮಮತಾ ಡಿ.ಎಸ್.ಗಟ್ಟಿ, ಚಂದ್ರಹಾಸ್ ಕರ್ಕೇರ, ಮಹಾಬಲ ಹೆಗ್ಡೆ, ಶಾಹುಲ್ ಹಮೀದ್, ಮುಹಮ್ಮದ್ ಮೋನು, ಅಶ್ರಫ್ ಕೆ.ಸಿ.ರೋಡ್, ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ಸಿದ್ದೀಕ್, ಫಾರೂಕ್ ಉಳ್ಳಾಲ್, ದೇವದಾಸ್ ಭಂಡಾರಿ, ಜೀವನ್ ದಾಸ್ ಶೆಟ್ಟಿ, ಪದ್ಮನಾಭ ನರಿಂಗಾನ, ಮುಸ್ತಫಾ ಹರೇಕಳ ಇದ್ದರು.

























































