ಬೆಂಗಳೂರು: ಚುನಾವಣೆಗೆ ಮುನ್ನವೇ ಬಿಜೆಪಿ ಸೋಲೊಪ್ಪಿಕೊಂಡಿದೆ. ಈ ಕಾರಣದಿಂದಾಗಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಬಿಜೆಪಿ ಹೈಕಮಾಂಡ್ ವಿಳಂಬ ಮಾಡುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೆಪಿಸಿಸಿ ವಕ್ತಾರ ಲಕ್ಷಯ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಬಾಬು, ಇನ್ನು 30 ದಿನಗಳಲ್ಲಿ ರಾಜ್ಯ ಚುನಾವಣೆ ಮುಕ್ತಾಯಗೊಂಡಿರುತ್ತದೆ. ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ ಬಹಳ ಶೋಚನೀಯ ಸ್ಥಿತಿಗೆ ಬಂದು ನಿಂತಿದೆ. ಅಭ್ಯರ್ಥಿ ಪಟ್ಟಿ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದಿದೆ. 2018ರ ಚುನಾವಣೆ ಸಮಯದಲ್ಲಿ ಬಿಜೆಪಿ ಏಪ್ರಿಲ್ 8ರಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದರು. 1952ರ ಚುನಾವಣೆಯಿಂದ 2018ರವರೆಗೆ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಲವು ಜನಸಂಘಕ್ಕಾಗಲಿ, ಬಿಜೆಪಿಗಾಗಲಿ ಸಾಧ್ಯವಾಗಿಲ್ಲ ಎಂದರು.
2004ರಲ್ಲಿ ಅನಂತ ಕುಮಾರ್ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಬಿಜೆಪಿಗೆ 79 ಸ್ಥಾನ ದೊರೆತಿತ್ತು. ಆಗ ಬಿಜೆಪಿ 28% ಮತ ಗಳಿಸಿತ್ತು. ಆಗ ಕಾಂಗ್ರೆಸ್ 38% ಮತಗಳಿಸಿತ್ತು. ಡಬಲ್ ಇಂಜಿನ್ ಸರ್ಕಾರ ಸಾಧನೆ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದು, ಕಳೆದ ಎರಡು ದಿನಗಳ ಘಟನೆ ನೋಡಿದರೆ, ಅವರಿಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಆಮೂಲಕ ಬಿಜೆಪಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ರಮೇಶ್ ಬಾಬು ಟೀಕಿಸಿದರು.
13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, 14ರಂದು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇರುವ ಕಾರಣ ನಾಮಪತ್ರ ಸಲ್ಲಿಕೆ ಸಾಧ್ಯವಿಲ್ಲ. ಭಾನುವಾರ ಸರ್ಕಾರಿ ರಜೆಯಿಂದ ನಾಮಪತ್ರ ಸಲ್ಲಿಕೆ ಸಾಧ್ಯವಿಲ್ಲ. ಹೀಗಾಗಿ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಸಿಗುವುದು ಕೇವಲ 6-6 ದಿನಗಳು ಮಾತ್ರ ಎಂದವರು ವಿಶ್ಲೇಷಣೆ ಮಾಡಿದರು.
ಬೊಮ್ಮಾಯಿ ಅವರು ಯಾರು ಬರ್ತೀರ ಬನ್ನಿ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಕುಸ್ತಿಗೆ ತೊಡೆ ತಟ್ಟಿದವರಿಗೂ ಟಿಕೆಟ್ ನೀಡುತ್ತಿಲ್ಲ ಎಂದರೆ, ಬಿಜೆಪಿ ಯಾವ ಸ್ಥಿತಿಯಲ್ಲಿ? ಯಡಿಯೂರಪ್ಪನವರು ಸಂತೋಷ್ ಹಾಗೂ ಹೈಕಮಾಂಡ್ ಮೇಲಿನ ಅನುಮಾನದಿಂದ ಆರು ತಿಂಗಳ ಹಿಂದೆಯೇ ಶಿಕಾರಿಪುರದಲ್ಲಿ ವಿಜೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದರು. ವಿಜಯೇಂದ್ರ ಅವರಿಗೂ ಇದುವರೆಗೂ ಟಿಕೆಟ್ ಘೋಷಣೆ ಮಾಡಿಲ್ಲ. ಈ ಮೂಲಕ ಬಿಜೆಪಿ ತಮ್ಮ ಸೋಲು ಒಪ್ಪಿಕೊಂಡಿದೆ ಎಂದ ರಮೇಶ್ ಬಾಬು, ಬೊಮ್ಮಾಯಿ ಅವರು ದೆಹಲಿಯಲ್ಲಿ ನಾವು ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಆಮೂಲಕ ಡಬಲ್ ಇಂಜಿನ್ ಸರ್ಕಾರಕ್ಕೆ ಅಭ್ಯರ್ಥಿ ಮಾಹಿತಿ ಕಲೆಹಾಕಲು ಸಾಧ್ಯವಾಗಿಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದೆ. ಮೋದಿ ಹಾಗೂ ಅಮಿತ್ ಶಾ, ನಡ್ಡಾ ಅವರು ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಇದೆಲ್ಲವೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದರು.
40% ಕಮಿಷನ್, ಪೇಸಿಎಂ, ಪಿಎಶ್ಐ, ಇತರೆ ನೇಮಕಾತಿ, ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಅಕ್ರಮ ಟೆಂಡರ್ ಸೇರಿದಂತೆ ಅನೇಕ ಕಾರಣಗಳಿಂದ ಬಿಜೆಪಿ ತಲ್ಲಣಗೊಂಡು ಸೋಲೋಪ್ಪಿಕೊಂಡಿದೆ ಎಂದವರು ಹೇಳಿದರು.





















































