ಮಂಗಳೂರು: ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕಡಲತಡಿಯ ಜಿಲ್ಲೆ ದಕ್ಷಿಣಕನ್ನಡದಲ್ಲಿ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಅದರಲ್ಲೂ ದಕ್ಷಿಣಕನ್ನಡದ ಖಡಕ್ ಡಿಸಿ ಎಂ.ಆರ್.ರವಿಕುಮಾರ್ ಅವರು ನೀತಿಸಂಹಿತೆ ಉಲ್ಲಂಘಿದರೆ ಆಗಬಹುದಾದ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದೇ ವೇಳೆ ತುಳುನಾಡಿನ ಸಾಂಸ್ಕೃತಿಕ ವೈಭವ, ಭೂತಾರಾಧನೆ, ನೇಮೋತ್ಸವ, ಯಕ್ಷಗಾನದಂತಹಾ ಕಾರ್ಯಕ್ರಮಗಳಿಗೆ, ಜಾತ್ರಾ ಮಹೋತ್ಸವಗಳಿಗೆ ಯಾವುದೇ ಅಡ್ಡಿಯಾಗದು ಎಂದು ಜಿಲ್ಲಾಧಿಕಾರಿ ಜನರಿಗೆ ಅಭಯ ನೀಡಿದ್ದಾರೆ.
ಈ ಕುರಿತಂತೆ ಮಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಅವರು ನಡೆಸಿದ ಸುದ್ದಿಗೋಷ್ಠಿ ಗಮನಸೆಳೆಯಿತು. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ಪ್ರಮುಖ ಕಲೆ ಯಕ್ಷಗಾನ, ಭೂತಾರಾಧನೆ, ಕೋಲ, ನೇಮ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ, ಕಾರ್ಯಕ್ರಮಗಳಿಗೆ ನಿರ್ಬಂಧ ಇರುವುದಿಲ್ಲ. ಆದರೆ, ಈ ಕಾರ್ಯಕ್ರಮಗಳಲ್ಲಿ ರಾಜಕೀಯ ಮುಖಂಡರು ಕಾರ್ಯಕರ್ತರಿಂದ ಪ್ರಚಾರ ರೂಪದ ಕಾರ್ಯಕ್ರಮ ರೂಪಿಸಿದಲ್ಲಿ, ಮತದಾರರ ಓಲೈಕೆಯ ಆರೋಪ ಕೇಳಿಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚುನಾವಣೆ ಕಾಲದಲ್ಲಿ ಯಾವುದೇ ಧರ್ಮಗಳ ಧಾರ್ಮಿಕ ಆಚರಣೆಗಳಿಗೆ ನೀತಿ ಸಂಹಿತೆ ಅಡ್ಡಿಯಾಗದು. ಇಂತಹಾ ಕಾರ್ಯಕ್ರಮಗಳ ಬಗ್ಗೆ ಬ್ಯಾನರ್, ಬಂಟಿಗ್ಸ್ ಹಾಕಬೇಕಾದರೆ ಸ್ಥಳೀಯ ಚುನಾವಣಾಧಿಕಾರಿ ಅನುಮತಿ ಪಡೆಯಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ಕಾರ್ಯ ಶೈಲಿಗೆ ಹೊಸ ರೂಪ ನೀಡಿ ಆಡಳಿತವನ್ನು ಬಿಗಿಗೊಳಿಸಿರುವ ನಿಷ್ಠೂರ ಅಧಿಕಾರಿಯೂ ಆದ ಎಂ.ಆರ್.ರವಿಕುಮಾರ್, ಈ ಬಾರಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಬಿಗಿ ಕ್ರಮಗಳನ್ನು ಪ್ರಕಟಿಸಿದ್ದಾರೆ .
ರಾಜಕೀಯ ಪಕ್ಷಗಳಿಗೂ ಖಡಕ್ ಸಂದೇಶ..
ಚುನಾವಣಾ ಪ್ರಚಾರ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಲಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ರವಿಕುಮಾರ್, ರಾಜಕೀಯ ಪಕ್ಷಗಳು ಚಮ್ಮ ಚುನಾವಣಾ ಪ್ರಚಾರಕ್ಕಾಗಿ ಸ್ಥಳ, ವೇದಿಕೆ ಅಥವಾ ತಾರಾ ಪ್ರಚಾರಕರನ್ನು ಕರೆಸಲು ಬಳಸುವ ಹೆಲಿಪ್ಯಾಡ್‌ಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ನೀಡಲಾಗಿದೆ. ರಾಜಕೀಯ ಪಕ್ಷಗಳು ಈ ಬಗ್ಗೆ ಅರ್ಜಿ ಸಲ್ಲಿಸಿ ಸೂಕ್ತ ಅನುಮತಿ ಪಡೆಯಬೇಕಾಗುತ್ತದೆ ಎಂದು ವಿವರಿಸಿದರು. ‘ಸುವಿಧಾ’ ಆಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದೂ ಅವರು ಮಾಹಿತಿ ಹಂಚಿಕೊಂಡರು.




















































