ಬೆಂಗಳೂರು: ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್, ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ ಗಳ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನ ಅವ್ಯವಹಾರಗಳು ಮತ್ತು ಪುನಃಶ್ಚೇತನ ಹಾಗೂ ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ ನ ಅವ್ಯವಹಾರಗಳ ಕುರಿತ ಪರಾಮರ್ಶೆ ಸಭೆಯಲ್ಲಿ ಮಾತನಾಡಿದರು. ಗುರುರಾಘವೇಂದ್ರ, ವಶಿಷ್ಠ ಸೌಹಾರ್ದ ಸೇರಿದಂತೆ ಇತರೆ ಯಾವುದೇ ಬ್ಯಾಂಕ್ ಗಳಲ್ಲಿ ನಡೆದಿರುವ ಅವ್ಯವಹಾರಗಳಿದ್ದರೆ ಆ ಪ್ರಕರಣಗಳನ್ನು ಸಹ ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುತ್ತದೆ. ಈ ಕುರಿತು ನಿರ್ಣಯ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಗರಣದ ತನಿಖೆ ಆರಂಭವಾಗಿ ಮೂರು ವರ್ಷವಾದರೂ ಸಾಲ ವಸೂಲಾತಿ ಆಗುತ್ತಿಲ್ಲ. ಸಭೆಗಳು ಮಾತ್ರ ನಡೆಯುತ್ತಿವೆಯೇ ಹೊರತು ಯಾವುದೇ ಫಲಿತಾಂಶ ಬರುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸಮಸ್ಯೆ ಏನು ಎಂದು ಗುರುರಾಘವೇಂದ್ರ ಬ್ಯಾಂಕ್ ನ ಆಡಳಿತಾಧಿಕಾರಿಯನ್ನು ಪ್ರಶ್ನಿಸಿದರು. ಸರ್ಕಾರದ ಮೇಲೆ ಠೇವಣಿದಾರರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಠೇವಣಿದಾರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಪ್ರಕರಣವನ್ನು ಸಿಬಿಐಗೆ ವಹಿಸಲಾಗುವುದು. ಸಂಪುಟದಲ್ಲಿ ಈ ಕುರಿತು ಪ್ರಸ್ತಾವನೆ ಮಂಡಿಸಲಾಗುವುದು ಎಂದು ಸಚಿವರು ಹೇಳಿದರು.
ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಸಮರ್ಥರಿದ್ದು ತನಿಖೆ ನಡೆಸುತ್ತಿದ್ದಾರೆ. ಆದರೆ ಸಾಲ ವಸೂಲಾತಿಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಸಿಬಿಐಗೆ ವಹಿಸಿದರೆ ಠೇವಣಿದಾರರಲ್ಲೂ ವಿಶ್ವಾಸ ಮೂಡಲಿದೆ ಎಂದರು.
ಸಚಿವರ ಈ ಮಾತಿಗೆ ಶಾಸಕರುಗಳಾದ ರವಿಸುಬ್ರಮಣ್ಯ, ಸೌಮ್ಯರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ ಅವರು ಸಹಮತ ವ್ಯಕ್ತಪಡಿಸಿದರು. ಸಭೆಯಲ್ಲಿ ಬ್ಯಾಂಕ್ ನ ಪುನಶ್ಚೇತನ, ಸಾಲ ವಸೂಲಾತಿಯಲ್ಲಿ ಆಗಿರುವ ಪ್ರಗತಿ ಕುರಿತು ಪರಾಮರ್ಶಿಸಲಾಯಿತು. ಈ ರೀತಿ ವಂಚನೆ ತಡೆಗೆ ಕಾನೂನಿನಲ್ಲಿ ತಿದ್ದಪಡಿ ತರುವ ಕುರಿತಂತೆ ಚರ್ಚಿಸಲಾಯಿತು.







































































