ಹಾವೇರಿ: ನಾವು ಬಳಸುವ ಪ್ರತಿಯೊಂದು ಪದವೂ ನಮ್ಮ ಆಶಯ ಮತ್ತು ಆಲೋಚನಾ ಕ್ರಮಕ್ಕೆ ಸಾಕ್ಷಿಯಂತಿರುತ್ತದೆ. ಪದಗಳನ್ನು ಕಸಿ ಮಾಡಿದಂತೆ ಹಲವು ರೀತಿಯ ಅಭಿವ್ಯಕ್ತಿ ಸಾಧ್ಯವಾಗಿ ಸಾಹಿತ್ಯ ಸಿರಿಯಾಗಲಿದೆ ಎಂದು ಹಿರಿಯ ಲೇಖಕಿ, ಚಿಂತಕಿ ಡಾ.ವಿಜಯಶ್ರೀ ಸಬರದ ಅವರು ಪ್ರತಿಪಾದಿಸಿದರು.
ಕನಕ ಶರೀಫ್ ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಜನವರಿ 06ರಂದು ನಡೆದ ಮೊದಲನೇ ಕವಿಗೋಷ್ಠಿಯಲ್ಲಿ ಅವರು ಆಶಯ ನುಡಿಗಳನ್ನಾಡಿದರು. ಇದೀಗ ಒಂದೇ ಕಾವ್ಯ ಮೀಮಾಂಸೆಯ ಬದಲು ಹಲವು ಕಾವ್ಯ ಮೀಮಾಂಸೆಗಳು ನಮ್ಮ ಮುಂದಿವೆ. ಹೊಸದಾಗಿ ಪ್ರಾದೇಶಿಕ ಮೀಮಾಂಸೆಯೂ ಜೀವ ತಳೆದಿದೆ. ಕಾವ್ಯ ಹೀಗಿರಬೇಕು ಅನ್ನುವುದು ಮೀಮಾಂಸೆ; ಕಾವ್ಯ ಹೀಗಿದೆ ಎಂದು ಹೇಳುವುದು ವಿಮರ್ಶೆ. ಕಾವ್ಯ ಮೀಮಾಂಸೆಯ ಚಹರೆಗಳು ಈಗ ಬದಲಾಗಿವೆ. ಹಿರಿಯ ಕವಿಗಳನ್ನು ಅಧ್ಯಯನ ಮಾಡಿದಲ್ಲಿ ಕಾವ್ಯ ಮೀಮಾಂಸೆಯ ಆಳವನ್ನು ಅರಿಯಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಹಿರಿಯ ಕವಿ ಸರಜೂ ಕಾಟ್ಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದಕ್ಕೂ ಮೊದಲು 25 ಕವಿಗಳು ಸತತ 75 ನಿಮಿಷಗಳ ಕಾಲ ತಮ್ಮದೇ ವಿಭಿನ್ನ ಶೈಲಿಯಲ್ಲಿ ಪದ್ಯವಾಚಿಸಿ ಗಮನ ಸೆಳೆದರು. ಕಿಕ್ಕಿರಿದು ಸೇರಿದ್ದ ಸಹೃದಯರಿಗೆ ಕಾವ್ಯದ ಸವಿಯನ್ನು ಉಣಬಡಿಸಿದರು.
-
ಲೇಖಕಿ ರೇಣುಕಾ ರಮಾನಂದ ಅವರು ‘ಮುಷ್ಠಿ ಬೀಜ ಬಿತ್ತಿದೆವು.. ಮುಷ್ಠಿ ಭತ್ತಕೀಗ ಹೊರೆಹುಲ್ಲು ಎಂದು ಭತ್ತದ ಮೇಲೆ ಪದ್ಯವಾಚಿಸಿ ಹಲವು ಅರ್ಥ ಹೊಮ್ಮಿಸಿದರು.
-
ಕವಿ ಕಥೆಗಾರ ಇಂದ್ರಕುಮಾರ ಎಚ್ ಬಿ ಅವರು ‘ಕಿಟಕಿ ಬಾಗಿಲಾಗಿ, ಬಾಗಿಲು ಲೋಕವಾಗಿ ತೆರೆದುಕೊಂಡರೆ ಅದನ್ನು ಪಾತಾಳ ಅನ್ನಬಹುದೇ’ ಎನ್ನುತ್ತ ಇಂದಿನ ದ್ವಂದ್ವ ಬದುಕಿನ ವಿಷಮ ಸ್ಥಿತಿ ತೆರೆದಿಟ್ಟರು.
-
‘ಅಸಹನೆಯ ಕಥೆಗಳನ್ನು ಜಳಪಿಸದಿರಿ..ಪರಂಪರೆಗೆ ಎಸಗುವ ದ್ರೋಹ ಕೊನೆಯಾಗಲಿ.. ವಿನಾಕಾರಣ ಕತ್ತಿಗಳನ್ನು ಜಳಪಿಸದಿರಿ’ ಎಂದು ಲೇಖಕಿ ಮಮತಾ ಅರಸಿಕೆರೆ ಅವರು ‘ವಿನಾಕಾರಣ ಹಕ್ಕುಗಳನ್ನು ಜಳಪಿಸದಿರು’ ಪದ್ಯದ ಮೂಲಕ ವ್ಯವಸ್ಥೆಯ ಬಗೆಗಿನ ತಕರಾರನ್ನು ಪ್ರಕಟಿಸಿದರು.
-
‘ಮತ್ತೇ ನೀನು ಹುಟ್ಟುವುದಾದರೆ’ ಶೀರ್ಷಿಕೆಯ ಪದ್ಯವಾಚಿಸಿದ ಶುಭಶ್ರೀ ಭಟ್ಟ ಅವರು, ‘ಮೋಹ ಕಳಚುವ ಬಗ್ಗೆ ಯೋಚಿಸಿದಷ್ಟು ಅದು ಸರಪಳಿ ಆಗುತ್ತದೆ’ ಎಂದರು.
-
‘ಮತ್ತೆ ಮರಳಿದೆ ಮಕರ.. ಮೆರೆದ ಮಂಗಳಗಳಿಗೆ ನಿತ್ಯ ಸಂಕ್ರಾಂತಿ’ ಎಂದು ಲೇಖಕಿ ಪುಷ್ಪಾ ವಿ. ಮಾಳೇಕೊಪ್ಪ ಅವರು ‘ಮತ್ತೆ ಮಕರ’ ಎನ್ನುವ ಪದ್ಯವನ್ನು ಸುಂದರವಾಗಿ ವಾಚಿಸಿದರು.
-
ವಿಜಯಪುರ ಜಿಲ್ಲೆಯ ಲೇಖಕಿ ಕೆ.ಸುನಂದಾ ಅವರು ‘ಎಲ್ಲರಂತಲ್ಲ ಸಿದ್ದಪ್ಪಾಜಿ ನೀವು.. ನಿಮ್ಮ ಇರುವೇ ಬೇರೆ.. ನಿಮ್ಮ ಸ್ತರವೇ ಬೇರೆ.. ಕಿಸೆ ಇಲ್ಲದೇ ಜೀವಿಸಿದವರು..’ ಎಂದು ಇತ್ತೀಚೆಗೆ ಅಗಲಿದ ಶ್ರೀ ಸಿದ್ದೇಶ್ವರ ಶ್ರೀಗಳ ಮೇಲೆ ಕಾವ್ಯವಾಚನ ಮಾಡಿ ಸಂತಾಪ ಸೂಚಿಸಿದರು.
-
ಲೇಖಕಿ ಶ್ರೀದೇವಿ ಕೆರೆಮನೆ ಅವರು, ‘ಸಾಯುವಾಗಲಾದರು ತುಟಿಯಂಚಿನಲ್ಲಿ ನಸು ನಗುತ್ತಿರಲಿ ಎಂದು ಬಯಸುವುದು ತಪ್ಪೇ..? ಹುಟ್ಟು ಸಾವಿನ ನಡುವೆ ಒಂದಿಷ್ಟಾದರು ತಪ್ಪಿಸಿಕೊಳ್ಳಬೇಕಾದರೆ ಒಂದಿಷ್ಟಾದರು ನಗು.. ನಡುವೆ ಸುಧೀರ್ಘವಾಗಿದೆ ಉಸಿರು..’ ಎನ್ನುವ ತಾತ್ವಿಕ ವಿಚಾರಧಾರೆಯ ಪದ್ಯವನ್ನು ವಾಚಿಸಿದರು.
-
ಬಳ್ಳಾರಿಯ ಕವಿ ಧಮ್ಮೂರ ಮಲ್ಲಿಕಾರ್ಜುನ ಅವರು ನಟ ಪುನಿತ್ ರಾಜಕುಮಾರ ಅಗಲಿಕೆಯಲ್ಲಿ ರಚಿಸಿದ ‘ಪುನಿತ್ ಎನ್ನುವ ಪುಣ್ಯಾತ್ಮ’ ಹೆಸರಿನ ಪದ್ಯ ವಾಚಿಸಿದರು.
-
ಮುಂಡರಗಿಯ ಡಾ.ವಿ.ಕೆ. ಸಂಕನಗೌಡ ಅವರು ಮಳೆಯಿಂದಾಗುವ ಅನಾಹುತಗಳ ಮೇಲೆ ರಚಿಸಿದ ‘ನಿನಗೆ ಮಳೆ ಅನ್ನುವುದಿಲ್ಲ’ ಎನ್ನುವ ಪದ್ಯ ವಾಚಿಸಿದರು.
-
ಶಿಗ್ಗಾವಿಯ ಡಾ.ಸುಮಂಗಲಾ ಅತ್ತಿಗೇರಿ ಅವರು ‘ಮೀಸಲಾತಿ ಬೇಕಿದೆ ನಮಗೆ ಮೀಸಲಾತಿ.. ಧರ್ಮದ ಕಾರಣಕ್ಕಲ್ಲ, ಬೇಕೆ ಬೇಕು ಮೀಸಲಾತಿ.. ಹಿಂಜರಿಯುವ ಮಾತೇ ಇಲ್ಲ. ನಮಗಾಗಿ.. ನಾವು ಸಹ ಒಂದಿಷ್ಟು ಯೋಚಿಸಲು.. ಎದೆಯೊಳಗಿನ ಕವಿತೆಗೆ ಜೀವ ಕೊಡಲು, ಕನಸಿನ ಮೊಟ್ಟೆಗಳಿಗೆ ಕಾವು ಕೊಡಲು ನಮಗು ಬೇಕಿದೆ ಸಮಯದ ಮೀಸಲಾತಿ’ ಎಂದು ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿದರು.
-
ಲೇಖಕಿ ರಂಜನಾ ನಾಯಕ ಅವರ ‘ನಿರಿಗೆ’ ಪದ್ಯ, ಉಡುಪಿಯ ಪೂರ್ಣಿಮಾ ಸುರೇಶ ಅವರ ‘ಅಕ್ಕನಂತವಳೊಬ್ಬಳು ಅನುರಕ್ತೆ’ ಪದ್ಯ, ಬಾಳಗುಣಸೆ ಮಂಜುನಾಥ ಅವರ ‘ಹೋಗಿ ಹೇಳ ಹೋಗು’ ಪದ್ಯ, ಮಂಡ್ಯದ ಲೇಖಕಿ ಕೆ ಎಂ ವಸುಂಧರಾ ಅವರ ‘ಪರಮೊಚ್ಚ ಉಧಾಸೀನರು’ ಪದ್ಯೆ, ಕವಿ ಮುದ್ದುವೀರಸ್ವಾಮಿ ಹಿರೇಮಳಲಿ ಅವರ ‘ನಿಮ್ಮಂತಲ್ಲ ಕಾಣ’ ಪದ್ಯ,ಬೆಂಗಳೂರಿನ ಡಿ ಸಿ ಗೀತಾ ಅವರ ‘ಪ್ರೀತಿ ಪಸೆಯಾದವರ ನಡುವೆ’ ಪದ್ಯ ಹಲವು ವಿಚಾರಗಳನ್ನು ಸಾದರಪಡಿಸಿದವು.
-
ಕವಿ ಚಂದ್ರಪ್ಪ ಬಾರಗಿ ಅವರು ಪವಿತ್ರ ಗೆಳೆತನ ತೇರು ಗಂಧ ಅನ್ನುವ ಸಂದೇಶದ ಪದ್ಯ ವಾಚಿಸಿದರು. ಕೋಲಾರದ ಅರಿನಾಗನಹಳ್ಳಿ ಅಮರನಾಥ ಅವರು ‘ಇದು ನೊಗ ಹೊತ್ತು ದಣಿದ ಬದುಕು’ ಎನ್ನುವ ತೀವ್ರ ವಿಷಾಧದ ಪದ್ಯ ವಾಚಿಸಿದರು.