ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ವ್ಯಾಪ್ತಿಯಲ್ಲಿನ 14 ಗ್ರಾಮಗಳಿಗೆ ಬಿಡಿಎ ವತಿಯಿಂದಲೇ ಕುಡಿಯುವ ನೀರು ಪೂರೈಕೆ ಮಾಡುವುದರ ಜೊತೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ, ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿದ ರೈತರು ಹಾಗೂ ಬಿಡಿಎ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಸಚಿವರು, ಕೆಂಪೇಗೌಡ ಬಡಾವಣೆಗಾಗಿ 14 ಹಳ್ಳಿಗಳ ರೈತರು ಜಮೀನು ನೀಡಿದ್ದಾರೆ. ಆ ಭಾಗದ ಜನತೆಗೆ ಬಿಡಿಎ ಮೂಲಸೌಕರ್ಯ ಕಲ್ಪಿಸಬೇಕು ಎಂದರು.
ವಲಗೇರಹಳ್ಳಿಯಲ್ಲಿ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಛಯಕ್ಕೆ ಮೂಲ ಸೌಕರ್ಯ ಕಲ್ಪಿಸಿದ ಬಳಿಕವಷ್ಟೇ ಪಾಲಿಕೆಗೆ ಹಸ್ತಾಂತರಿಸಬೇಕು. ಯಾವುದೇ ನ್ಯೂನತೆ ಇಲ್ಲದ ರೀತಿಯಲ್ಲಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿ ಹಸ್ತಾಂತರಿಸಬೇಕು ಎಂದು ಸಚಿವರು ಇದೇ ವೇಳೆ ಹೇಳಿದರು.
ಕೆಂಪೇಗೌಡ ಬಡಾವಣೆಗಾಗಿ ಭೂಮಿ ನೀಡಿದ ಶೇ.90ರಷ್ಟು ರೈತರಿಗೆ ನಿವೇಶನ ನೀಡಲಾಗಿದ್ದು ಉಳಿದ ಶೇ.10ರಷ್ಟು ರೈತರಿಗೆ ಶೀಘ್ರದಲ್ಲಿ ನಿವೇಶನ ಹಂಚಿಕೆ ಮಾಡಬೇಕು. ಭೂಮಿ ನೀಡಿದ ರೈತರು ನಿವೇಶನಕ್ಕಾಗಿ ಬಿಡಿಎ ಕಚೇರಿಗೆ ಅಲೆದಾಡುವುದು ತಪ್ಪಬೇಕು. ನಿವೇಶನ ನೀಡುವಿಕೆಯಲ್ಲಿ ವಿಳಂಬವಾಗಬಾರದು ಎಂದರು.
ಬಡಾವಣೆಯಲ್ಲಿ ಸಿಎ, ಪಾರ್ಕ್ ಜಾಗ ಕಬಳಿಕೆಯಾಗದಂತೆ ನೋಡಿಕೊಳ್ಳಬೇಕು. ರೆವಿನ್ಯೂ ಬಡಾವಣೆಯಲ್ಲಿ ನೋಂದಣಿಯಾಗಿರುವ ನಿವೇಶನ ಹಾಗೂ ಕಟ್ಟಿರುವ ಮನೆಗಳಿಗೆ ಖಾತೆ ಮಾಡಿಕೊಡುವ ಸಂಬಂಧ ನೋಟಿಫಿಕೇಷನ್ ಹೊರಡಿಸಲಾಗಿದೆಯಾದರೂ ಇದುವರೆಗೂ ಈ ಬಗ್ಗೆ ಕ್ರಮವಹಿಸಿಲ್ಲ. ಈ ಕುರಿತು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಬಡಾವಣೆಗಾಗಿ ಭೂಮಿ ನೀಡಿದ ರೈತರಿಗೆ ಪ್ರೋತ್ಸಾಹ ಯೋಜನೆಯಡಿ ನಿವೇಶನ ನೀಡದಿರುವುದರ ಬಗ್ಗೆ ರೈತರು ಸಚಿವರ ಗಮನಕ್ಕೆ ತಂದರು. ಈ ಕುರಿತು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸೂಚಿಸಿದರು.
ಭೂಮಿ ನೀಡಿದ ರೈತರಿಗೆ ತ್ವರಿತಗತಿಯಲ್ಲಿ ನಿವೇಶನ ನೀಡಲಾಗುವುದು. ಇಸಿಡಿ ಮಾಡಿಸಿ ರೈತರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಲಾಟರಿ ಪದ್ಧತಿ ಇರುವುದಿಲ್ಲ. ಈ ಕುರಿತು ಈಗಾಗಲೇ ಸಭೆ ನಡೆಸಲಾಗಿದ್ದು ತ್ವರಿತವಾಗಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅವರು ಭರವಸೆ ನೀಡಿದರು.
ರೈತರಿಗೆ ನೀಡಿದ ನಿವೇಶನ ನೋಂದಣಿ ಮಾಡಿಕೊಡಲು ಬಿಡಿಎಗೆ ರೈತರು ಅಲೆದಾಡುವುದನ್ನು ತಪ್ಪಿಸಬೇಕು ಎಂದು ಸಚಿವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಡಿಎ ಆಯುಕ್ತರಾದ ಕುಮಾರ್ ನಾಯಕ್ ಅವರು, ಹಿಂದಿನ ಪರಿಸ್ಥಿತಿ ಈಗಿಲ್ಲ. ಕೆಂಪೇಗೌಡ ಬಡಾವಣೆ ಅಭಿವೃದ್ಧಿ, ರೈತರಿಗೆ ನಿವೇಶನ ಹಂಚಿಕೆ ಸಂಬಂಧ ತ್ವರಿತಗತಿಯಲ್ಲಿ ಕಡತ ವಿಲೇವಾರಿ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ನಿವೇಶನ ಹಂಚಿಕೆ ಮಾಡಿ ಬಡಾವಣೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ಬಡಾವಣೆಗೆ ಸಂಪರ್ಕ ರಸ್ತೆ ಕಲ್ಪಿಸುವುದು, ಕೆಂಪೇಗೌಡ ಬಡಾವಣೆಯಲ್ಲಿ ಕೆಂಪೇಗೌಡ ಭವನ ನಿರ್ಮಿಸಿಲು ಮೀಸಲಿಟ್ಟಿರುವ 4 ಎಕರೆ 21 ಗುಂಟೆ ಜಾಗದ ಅಭಿವೃದ್ಧಿ ಸೇರಿದಂತೆ ನಾನಾ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ರೈತರು ಇದೇ ಸಂದರ್ಭದಲ್ಲಿ ನೀಡಿದರು.

























































