ಬೆಂಗಳೂರು: ರಾಜ್ಯ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆಯ ಸಂಬಂಧ ದೊಡ್ಡಬಳ್ಳಾಪುರದ ಬಳಿ ನಡೆದ “ಜನಸ್ಪಂದನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರ ವಿಶ್ವಾಸ ಮತ್ತು ಬೆಂಬಲಕ್ಕೆ ಚಿರಋಣಿ ಎಂದರು. 2019ರಲ್ಲಿ ಕಾಂಗ್ರೆಸ್‍ನ ಕುತಂತ್ರ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲಾಯಿತು. ಜೆಡಿಎಸ್ ಜೊತೆ ಅನೈತಿಕವಾಗಿ ಕೈ ಜೋಡಿಸಿದರು. ಕೇವಲ ಅಧಿಕಾರಕ್ಕಾಗಿ ಏನೆಲ್ಲ ಮಾಡಲು ಸಿದ್ಧ ಎಂಬುದು ಆಗ ಗೊತ್ತಾಯಿತು. 17 ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸಿದರು. ಅವರೆಲ್ಲರೂ ವೀರರು ಎಂದರು.
ಯಡಿಯೂರಪ್ಪ ಅವರ ನಾಯಕತ್ವವು ಸಮರ್ಥವಾಗಿ ಕೋವಿಡ್ ಎದುರಿಸಿದೆ. ಜನರ ಪ್ರಾಣ ಉಳಿಸುವ ಕೆಲಸ ಮಾಡಿದೆ. ನರೇಂದ್ರ ಮೋದಿಜಿ ಅವರು 1 ಲಕ್ಷ ಕೋಟಿಗಿಂತ ಹೆಚ್ಚು ಅನುದಾನ ನೀಡಿದ್ದಾರೆ. 130 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಕೊಡಲಾಗಿದೆ. ಕಾಂಗ್ರೆಸ್ ಮಾತಿನಲ್ಲಿ ಮಾತ್ರ ಜನಸೇವೆ ಮಾಡುತ್ತದೆ. ಮೋದಿಯವರು ಕೊಟ್ಟ ಅಕ್ಕಿಯನ್ನು ತಮ್ಮ ಪಕ್ಷದ ಸರಕಾರದ ಹೆಸರಿನಲ್ಲಿ ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಅನ್ನಭಾಗ್ಯದ ಅವ್ಯವಹಾರ ತನಿಖೆ ಮಾಡುತ್ತಿದ್ದ ಅಧಿಕಾರಿಯ ಸಂಶಯಾಸ್ಪದ ಸಾವು ಆಗಿದೆ. ಮರಳಿನಲ್ಲೂ ಅವ್ಯವಹಾರ ನಡೆಯಿತು. 36 ಸಾವಿರ ಬೋರ್‍ವೆಲ್ ವಿಚಾರ, ಎಸ್‍ಸಿ ಎಸ್‍ಟಿ ತಲೆದಿಂಬು, ಹಾಸಿಗೆ, ಬಿಡಿಎ ನಿವೇಶನ, ಲ್ಯಾಪ್‍ಟಾಪ್ ನೀಡಿಕೆಯಲ್ಲೂ ಹಗರಣಗಳು ಆಗಿವೆ. ಕಾಂಗ್ರೆಸ್‍ನದು ನಿರಂತರ ಭ್ರಷ್ಟಾಚಾರದ ಸರಕಾರ ಎಂದು ಆರೋಪಿಸಿದರು.
ಮರಳು ಮಾಫಿಯಾ, ಕೊಳವೆ ಬಾವಿ ಹಗರಣ, ಅರ್ಕಾವತಿ ರೀಡೂ ಹಗರಣ, ಎಸ್‌ಸಿ-ಎಸ್‌ಟಿ ಹಾಸ್ಟೆಲ್ ಬೆಡ್ ಹಗರಣ, ಲ್ಯಾಪ್‌ಟಾಪ್ ಹಗರಣ, ಹೀಗೆ ಸಾಲು ಸಾಲು ಹಗರಣಗಳು ಕಾಂಗ್ರೆಸ್ ಅವಧಿಯಲ್ಲಿ ಆಗಿವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 100% ಭ್ರಷ್ಟಾಚಾರ ನಡೆದಿದೆ.
– ಶ್ರೀ @BSBommai, ಸನ್ಮಾನ್ಯ ಮುಖ್ಯಮಂತ್ರಿಗಳು. #JanaSpandana pic.twitter.com/RIY5KILueH
— BJP Karnataka (@BJP4Karnataka) September 10, 2022
ಪೊಲೀಸ್ ನೇಮಕಾತಿ ವಿಚಾರದಲ್ಲೂ ಹಗರಣ ನಡೆದಿದ್ದು ಕ್ರಮ ತೆಗೆದುಕೊಂಡಿಲ್ಲ. ಶಿಕ್ಷಕರ ನೇಮಕದಲ್ಲೂ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ದುಷ್ಟ ನಾಟಕ ಇನ್ನು ಮುಂದೆ ಕರ್ನಾಟಕದಲ್ಲಿ ನಡೆಯದು ಎಂಬ ಸಂಕಲ್ಪವನ್ನು ಜನರು ಮಾಡಿದ್ದಾರೆ ಎಂದು ನುಡಿದರು.
ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಡಲಾಗುತ್ತಿದೆ. 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗುತ್ತಿದೆ. 21ನೇ ಶತಮಾನ ಜ್ಞಾನದ ಶತಮಾನ ಆಗಿದೆ. ಕೃಷಿಗೆ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದೇವೆ. ಹಾಲು ಉತ್ಪಾದಕರಿಗೆ ಬ್ಯಾಂಕ್ ತೆರೆಯುತ್ತಿದ್ದೇವೆ. ಸಮಾಜ ಕಲ್ಯಾಣದಲ್ಲಿ ಹಾಸ್ಟೆಲ್‍ಗಳನ್ನು ತೆರೆದಿದ್ದು, ಸ್ಕಾಲರ್‍ಶಿಪ್ ಕೊಡಲಾಗುತ್ತಿದೆ. ಎಸ್‍ಟಿ, ಎಸ್‍ಸಿಗಳಿಗೆ ಉಚಿತವಾಗಿ 75 ಯೂನಿಟ್ ವಿದ್ಯುತ್ ಕೊಡಲಾಗುತ್ತಿದೆ ಎಂದು ವಿವರ ನೀಡಿದರು.
ಬಡವರಿಗೆ ಮೊದಲು 30 ಕೆಜಿ ಅಕ್ಕಿ ಬರುತ್ತಿತ್ತು. ಮೋದಿ ಸರ್ಕಾರ ನೀಡುತ್ತಿದ್ದ ಅಕ್ಕಿ ಚೀಲದ ಮೇಲೆ ಸಿದ್ದರಾಮಯ್ಯ ಫೋಟೋ ಹಾಕಿಕೊಂಡರು.
– ಶ್ರೀ @BSBommai, ಸನ್ಮಾನ್ಯ ಮುಖ್ಯಮಂತ್ರಿಗಳು. #JanaSpandana pic.twitter.com/zvndzeKGcv
— BJP Karnataka (@BJP4Karnataka) September 10, 2022
ಸಮಾಜದ ಎಲ್ಲ ವರ್ಗದ ಸಾಮಥ್ರ್ಯ ಹೆಚ್ಚಳ, ನೀರಾವರಿಗೆ ಆದ್ಯತೆ ಕೊಡಲಾಗಿದೆ. ಎತ್ತಿನಹೊಳೆ ಯೋಜನೆ ನಾವೇ ಆರಂಭಿಸಿದ್ದೇವೆ. 3 ಸಾವಿರ ಕೋಟಿಯನ್ನು ನೀಡಿ, ಇದೇ ವರ್ಷ ಇಲ್ಲಿಗೆ ಎತ್ತಿನಹೊಳೆ ನೀರನ್ನು ಹರಿಸಲಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೈಗಾರಿಕಾ ಟೌನ್‍ಶಿಪ್, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿಯನ್ನು ಸೆಟಲೈಟ್ ಟೌನ್ ಆಗಿ ಅಭಿವೃದ್ಧಿ ಮಾಡಲಿದ್ದೇವೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿ, ಕೈಗಾರಿಕಾ ನೀತಿ, ಉದ್ಯೋಗ ನೀಡಿಕೆ ನೀತಿ ನಮ್ಮದು. ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆ ನಮ್ಮದು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದ ಅವರು, ಅಧಿಕಾರ ಪಡೆಯುವ ಕಾಂಗ್ರೆಸ್ ಕನಸು ಕೇವಲ ಕನಸಾಗಿಯೇ ಉಳಿಯಲಿದೆ. ಭ್ರಷ್ಟ ಕಾಂಗ್ರೆಸ್‍ಗೆ ಮತ್ತೆ ಅವಕಾಶ ಇಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಜನಶಕ್ತಿ ಇದನ್ನು ತೀರ್ಮಾನ ಮಾಡಲಿದೆ. ಭ್ರಷ್ಟ ಹಣ ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮ ಬಂಡವಾಳÀ ಪ್ರಯೋಜನ ಪಡೆಯದು. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಹಗರಣಗಳನ್ನು ಜನರ ಮುಂದಿಡುತ್ತೇವೆ ಎಂದು ಎಚ್ಚರಿಸಿದರು.
2023ರಲ್ಲಿ ಮತ್ತೆ ಕಮಲ ಅರಳಲಿದೆ. ಸಮೃದ್ಧ ನಾಡಿನ ಕನಸು ನನಸಾಗಲಿದೆ ಎಂದರು. ಡಬಲ್ ಎಂಜಿನ್ ಸರಕಾರದ ಲಾಭ ಜನರಿಗೆ ಸಿಗಲಿದೆ ಎಂದು ವಿಶ್ವಾಸದಿಂದ ನುಡಿದರು. ಜನಸ್ಪಂದನೆ ವಿಜಯೋತ್ಸವದ ಮೂಲಕ ಕೊನೆಯಾಗಲಿದೆ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಧ್ವಜ ಅರಳುವ ಸಂದೇಶವನ್ನು ಈ ಸಮಾವೇಶ ನೀಡಿದೆ ಎಂದರು. ಈ ಸಮಾವೇಶ ಯಶಸ್ಸಿಗೆ ಶ್ರಮಿಸಿದ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರನ್ನು ಅವರು ಅಭಿನಂದಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಡಾ. ಸುಧಾಕರ್ ಅವರ ಪರಿಶ್ರಮದಿಂದ ಈ ಭಾಗದಲ್ಲಿ ಹೆಚ್ಚು ಶಾಸಕರು ಗೆಲ್ಲಲಿದ್ದಾರೆ. ಪಕ್ಷವು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಗರಿಷ್ಠ ಸವಲತ್ತುಗಳನ್ನು ಜನರಿಗೆ ನೀಡಿದೆ. ಕಿಸಾನ್ ಸಮ್ಮಾನ್ ಅಡಿಯಲ್ಲಿ ಒಟ್ಟು 10 ಸಾವಿರವನ್ನು ನೀಡಲಾಗುತ್ತಿದೆ. ರಾಹುಲ್ ಗಾಂಧಿ ಅವರ ಮನೆತನದ ಮೂರು ಜನರು ಪ್ರಧಾನಿಗಳಾದರೂ ಬಡತನ ನಿವಾರಣೆ ಆಗಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಪ್ರಧಾನಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್ಸಿಗರ ಅಧಿಕಾರದ ಕನಸು ನನಸಾಗದು ಎಂದು ಎಚ್ಚರಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ; ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಗಳಿಸಲಿದೆ ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಲು ಮನವಿ ಮಾಡಿದರು.







































































