ಎಚ್ಚರ.. ಸಿಎಂ ಬೊಮ್ಮಾಯಿ ಕಚೇರಿಗೆ ದೂರು ನೀಡುವ ಮುನ್ನ ಯೋಚಿಸಲೇಬೇಕಿದೆ.. ಸಿಎಂ ಕಚೇರಿ ಕಡತ ನಾಯಿಗಳ ಸಂತಾನಹರಣ ಕೇಂದ್ರಕ್ಕೆ ಶಿಫ್ಟ್.. ಸರ್ಕಾರದ ಅಧಿಕಾರಿಗಳ ನಡೆಗೆ ಆಕ್ರೋಶ “ಸಿಟಿಜನ್ ರೈಟ್ಸ್” ಕಿಡಿ..
ಬೆಂಗಳೂರು: ಪರ್ಸಂಟೇಜ್ ಆರೋಪವಷ್ಟೇ ಅಲ್ಲ, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಆಡಳಿತ ವಿಚಾರದಲ್ಲೂ ಎಡವಿದೆ. ಅಷ್ಢೇ ಅಲ್ಲ, ಅಪ್ರಬುದ್ಧತೆಯ ನಡೆಯಿಂದಾಗಿ ಸಾರ್ವಜನಿಕರೂ ಸರ್ಕಾರದ ಬಗ್ಗೆ ಛೀಮಾರಿ ಹಾಕುವಂತಾಗಿದೆ.
‘ಯಾವುದೋ ವಿಚಾರ ಇನ್ಯಾವುದೋ ಇಲಾಖೆ..’ ಇದು ಬಸವರಾಜ್ ಬೊಮ್ಮಯಿ ಸರ್ಕಾರದ ಕಾರ್ಯವೈಖರಿ. ಇದಕ್ಕೆ ಸಾಕ್ಷಿಯಾಗಿರುವುದು ವಿಧಾನಸೌಧದಲ್ಲಿರುವ ಸ್ವತಃ ‘ಮುಖ್ಯಮಂತ್ರಿಯವರ ಕಚೇರಿ’.
ರಾಜಧಾನಿ ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್, ಜಾಹೀರಾತು ಬಳಕೆಗೆ ನಿರ್ಬಂಧವಿದೆ. 2018ರಲ್ಲಿ ಬಿಬಿಎಂಪಿ ಕೈಗೊಂಡ ಈ ನಿರ್ಧಾರದಿಂದ ಆ ಉದ್ಯಮ ಕ್ಷೇತ್ರವನ್ನು ಅವಲಂಭಿಸಿರುವ ಸುಮಾರು 50 ಸಾವಿರ ಕುಟುಂಬಗಳು ಬೀದಿಗೆ ಬಿದ್ದಿವೆ. ಅದಾಗ್ಯೂ ಸೌಂದರ್ಯ, ಪರಿಸರ ನೈರ್ಮಲ್ಯ ಹಾಗೂ ಅಪಘಾತ ನಿಯಂತ್ರಿಸುವ ಉದ್ದೇಶದಿಂದ ನಿರ್ಬಂಧ ಹೇರಲಾಗಿದೆ ಎಂಬುದು ಅಧಿಕಾರಿಗಳ ವಾದ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರೇತರ ಸಂಸ್ಥೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’, ಈ ನಿರ್ಧಾರ ಸರಿಯೇ ಆಗಿದ್ದರೆ ರಾಜ್ಯವ್ಯಾಪಿ ನಿರ್ಬಂಧ ಜಾರಿಗೆ ಬರಲಿ, ಇಲ್ಲವೆಂದಾದರೆ ಬೆಂಗಳೂರಿನಲ್ಲಿರುವ ನಿಷೇಧವನ್ನು ತೆರವುಗೊಳಿಸಿ ಎಂದು 24.08.2022ರಂದು ಸಿಎಂಗೆ ಪತ್ರ ಬರೆದಿದೆ. ಪ್ರಿಂಟಿಂಗ್ ಬ್ಯಾನ್ ಅಂತೀರಿ; ಆದರೆ ಅದಕ್ಕೆ ಬಳಕೆಯಾಗುವ ಸಾಮಾಗ್ರಿಗಳ ಮಾರಾಟಕ್ಕೆ ಅವಕಾಶ ನೀಡಿ ಜಿಎಸ್‌ಟಿ ಸಂಗ್ರಹಿಸುತ್ತಿದ್ದೀರಿ ಎಂದು ಸಿಟಿಜನ್ ರೈಟ್ಸ್ ಸಂಸ್ಥೆಯು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಅಧಿಕಾರಿಗಳ ಈ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಿಎಂ ಕಚೇರಿಗೆ ಪತ್ರಬರೆದಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಮುಖ್ಯಸ್ಥ ಕೆ.ಎ.ಪಾಲ್, ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡ ಪತ್ರ ಹೀಗಿದೆ.
ಇವರಿಗೆ,
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು-560001.ವಿಷಯ: ಪ್ಲೆಕ್ಸ್ ಪ್ರಿಂಟಿಂಗ್ ವಿಚಾರದಲ್ಲಿ ನಗರ ಹಾಗೂ ನಾಗರಿಕರಿಗೆ ಅನುಕೂಲವಾಗುವ ತೀರ್ಮಾನ ಕೋರಿದ್ದ ಪತ್ರ ಕುರಿತು.
ಹಾಗೂ ಫ್ಲೆಕ್ಸ್ ಮತ್ತು ‘ಪ್ರಾಣಿ ನಿಯಂತ್ರಣ’ ವಿಭಾಗಕ್ಕೆ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ.ಮಾನ್ಯರೇ,
1) ನಾಗರಿಕರ ಪರವಾಗಿ ಜವಾಬ್ದಾರಿಯುತ ಕೆಲಸ ಮಾಡುತ್ತಿರುವ ಸಿಟಿಜನ್ ರೈಟ್ಸ್ ಫೌಂಡೇಶನ್, ಸಾಮಾಜಿಕ ಹಿತಾಸಕ್ತಿಗಾಗಿ ಕಾನೂನು ಹೋರಾಟ ಸಹಿತ ಹಲವು ರೀತಿಯ ಹೋರಾಟಗಳನ್ನು ಕೈಗೊಂಡಿದೆ. ಅದೇ ರೀತಿ ನಮ್ಮ ಸಂಸ್ಥೆಯು ಸಿಟಿಜನ್ಸ್ ಪರವಾಗಿ 24.08.2022ರಂದು ನೀಡಿರುವ ಅಹವಾಲು ಬಗ್ಗೆ ತಮ್ಮ ಸರ್ಕಾರ ಹಾಗೂ ತಮ್ಮ ಕಚೇರಿಯ ಅಧಿಕಾರಿಗಳು ರಾಜ್ಯದ ಜನರ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿರುವುದು ಸರಿಯಾದ ಕ್ರಮವಲ್ಲ ಎಂಬುದನ್ನು ತಮ್ಮ ಗಮನ ಸೆಳೆಯುತ್ತಿದ್ದೇವೆ.
2) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ಪ್ರಿಂಟಿಂಗ್ ನಿಷೇಧದ ಕ್ರಮದ ಬಗ್ಗೆ ನಗರ ಹಾಗೂ ನಾಗರಿಕರ ಅನುಕೂಲಕ್ಕೆ ತಕ್ಕಂತೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರಿ ನಮ್ಮ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ವತಿಯಿಂದ 24.08.2022ರಂದು ತಮಗೆ ಪತ್ರ (Ref No: CRF/BLR/REP/013/2022) ಬರೆಯಲಾಗಿತ್ತು. ಈ ಪತ್ರವನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಕಚೇರಿಯು ಸಂಖ್ಯೆ:000185 ನಮೂದಿಸಿ ದಾಖಲು ಮಾಡಿದೆ. ಬಳಿಕ “ಮುಖ್ಯ ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು / ನಿಯಮಾನುಸಾರ ಸೂಕ್ತ ಕ್ರಮಕ್ಕಾಗಿ” ಎಂದು ನಮೂದಿಸಿ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಅಂಕಿತ ಹಾಕಿದ್ದರು. ಆದರೆ ಮುಂದಿನ ಕ್ರಮ ಮಾತ್ರ ನಾಗರಿಕರಿಗೆ ಅವಮಾನ ಮಾಡಲಾಗಿದೆಯೇ ಎಂಬ ಅನುಮಾನ ಮಾಡುವಂತಿದೆ.
3) ಪರಿಸರ ಸೌಂದರ್ಯಕ್ಕಾಗುವ ಹಾನಿಯನ್ನು ತಡೆಯುವ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ಸಂಬಂಧ, ಫ್ಲೆಕ್ಸ್ / ಜಾಹೀರಾತು ನಿಷೇಧಿಸಲು ಬಿಬಿಎಂಪಿ 06.08.2018ರಂದು ಕೈಗೊಂಡಿರುವ ನಿರ್ಣಯ (ಸಂ: 62/2018-19) ಪರಿಪೂರ್ಣ ಉದ್ದೇಶವನ್ನು ಹೊಂದಿಲ್ಲ ಎಂಬ ಸಂಗತಿಯನ್ನು ಆ ಪತ್ರದಲ್ಲಿ ತಮ್ಮ ಗಮನ ಸೆಳೆದಿದ್ದೆವು. ಬಿಬಿಎಂಪಿ ನಿರ್ಣಯ ವಿಚಾರ ಪ್ರಸ್ತುತ ಮಾನ್ಯ ಹೈಕೋರ್ಟ್’ನಲ್ಲಿ ವಿಚಾರಣಾ ಹಂತದಲ್ಲಿದ್ದು ರಾಜ್ಯ ಸರ್ಕಾರವೂ ಪ್ರತಿವಾದಿಯಾಗಿರುವುದರಿಂದ ನಮ್ಮ ಪತ್ರಕ್ಕೆ ಮಹತ್ವ ನೀಡಬೇಕಿದೆ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ.
ರಾಜ್ಯ ಸರ್ಕಾರದ ಅಧೀನದಲ್ಲೇ ಇರುವ ಸಾರಿಗೆ ಬಸ್ಸುಗಳಲ್ಲಿ ಜಾಹೀರಾತು ಹಾಕಲಾಗುತ್ತಿದೆ. ನಗರಗಳಲ್ಲಿ ಸರ್ಕಾರವೇ ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆಗಳ ಜಾಹೀರಾತುಗಳನ್ನೂ ಆಗಾಗ್ಗೆ ಹಾಕುತ್ತಿರುತ್ತದೆ. ಗೌರವಾನ್ವಿತರು, ಗಣ್ಯರ ರಾಜ್ಯ ಭೇಟಿ ಸಂದರ್ಭಗಳಲ್ಲೂ ಜಾಹೀರಾತುಗಳು ರಾರಾಜಿಸುತ್ತಿರುತ್ತವೆ.
4) ಅಷ್ಟೇ ಅಲ್ಲ, ಪರಿಸರ ಹಾನಿಯ ಸಾಮಗ್ರಿ ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ನಿರ್ಣಯ ಅಂಗೀಕರಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದು, ಇದು ನಿಜವೇ ಆಗಿದ್ದರೆ, ತೆರಿಗೆ ಕಟ್ಟಿಸಿಕೊಂಡು ಅಂತಹ ಸಾಮಗ್ರಿಗಳ ಮಾರಾಟಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಅನುಮತಿ ನೀಡುತ್ತಿರಲಿಲ್ಲ ಅಲ್ಲವೇ?
5) ಇಂತಹ ಜಾಹೀರಾತುಗಳು ಬಿಬಿಎಂಪಿಯ ನಿರ್ಣಯಗಳಿಂದ ಹೊರಗಿದ್ದಾವೆಯೇ? ನಿರ್ಬಂಧಿತ ಎಂದು ಬಿಬಿಎಂಪಿ ಬೊಟ್ಟು ಮಾಡಿರುವ ಈ ಸಾಮಗ್ರಿಗಳ ಮಾರಾಟವೂ ಈ ನಿರ್ಣಯದಿಂದ ಹೊರಗುಳಿದಿವೆಯೇ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ ಅಲ್ಲವೇ? ಈ ಅಭಿಪ್ರಾಯಗಳನ್ನಾಧರಿಸಿ ಪತ್ರ ಬರೆದಿರುವ ನಮ್ಮ ಸಂಸ್ಥೆ, ಈ ನಿರ್ಣಯ ಅರ್ಥಪೂರ್ಣವೇ ಆಗಿದ್ದಲ್ಲಿ ಇದು ಬೆಂಗಳೂರಿಗಷ್ಟೇ ಸೀಮಿತವಾಗಿರದೆ ಇಡೀ ರಾಜ್ಯಕ್ಕೆ ಅನ್ವಯವಾಗುವ ರೀತಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ ಹಾಗೂ ಅದಕ್ಕೆ ಸಂಬಂಧಿತ ಸಾಮಗ್ರಿಗಳ ಉತ್ಪಾದನೆ, ಆಮದು, ಮಾರಾಟ ನಿರ್ಬಂಧಿಸುವ ಬಗ್ಗೆ ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಲಿ ಎಂಬ ಅಭಿಪ್ರಾಯವನ್ನು ರಾಜ್ಯದ ಮುಖ್ಯಮಂತ್ರಿಯಾಗಿರುವ ತಮ್ಮ ಗಮನ ಸೆಳೆದಿದ್ದೇವೆ.
6) ತಮ್ಮ ಕಚೇರಿ ಅಧಿಕಾರಿಗಳು ಈ ಅಹವಾಲನ್ನು ಕಾನೂನು ಇಲಾಖೆ ಅಥವಾ ಬಿಬಿಎಂಪಿ ಆಡಳಿತಾಧಿಕಾರಿ / ಆಯುಕ್ತರಿಗೆ ಕಳುಹಿಸಿದ್ದರೆ ಪರವಾಗಿರಲಿಲ್ಲ. ಆದರೆ ಬೀದಿ ನಾಯಿಗಳ ಹಾವಳಿ ತಡೆಯುವ/ ನಾಯಿಗಳ ಸಂತಾನ ನಿಯಂತ್ರಿಸುವ / ಬೀದಿ ನಾಯಿಗಳನ್ನು ಹಿಡಿಯುವಂತಹ ‘ಪ್ರಾಣಿ ನಿಯಂತ್ರಣ’ ವಿಭಾಗಕ್ಕೆ ರವಾನಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದಂತಿದೆ. ಫ್ಲೆಕ್ಸ್ ಪ್ರಿಂಟಿಂಗ್ ವಿಚಾರಕ್ಕೂ ‘ಪ್ರಾಣಿ ನಿಯಂತ್ರಣ’ ವಿಭಾಗಕ್ಕೂ ಸಂಬಂಧ ಏನಾದರೂ ಇದೆಯೇ ಎಂಬುದನ್ನು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿದಿಲ್ಲವೇ? ಮುಖ್ಯಮಂತ್ರಿಯವರ ಸೂಚನೆ ಇಲ್ಲದೆ ಯಾವ ಕ್ರಮವೂ ಜಾರಿಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುತ್ತಾರೆ. ಹಾಗಾಗಿ ಇದೀಗ ಫ್ಲೆಕ್ಸ್ ಕುರಿತ ಈ ಪತ್ರವು ‘ಪ್ರಾಣಿ ನಿಯಂತ್ರಣ’ ವಿಭಾಗಕ್ಕೆ ರವಾನೆಯಾಗುವಲ್ಲೂ ಮುಖ್ಯಮಂತ್ರಿಯವರ ಪಾತ್ರ ಇದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುವಂತಿದೆ.
7) ಈ ಮೂಲಕ ತಮ್ಮಲ್ಲಿ ಕೋರುತ್ತಿರುವುದೇನೆಂದರೆ, 50,000ಕ್ಕೂ ಹೆಚ್ಚು ಕುಟುಂಬಗಳ ಹಿತ ಆಧರಿಸಿ ನಮ್ಮ ಸಂಸ್ಥೆ ನೀಡಿರುವ ಅಹವಾಲನ್ನು ಸಂಬಂಧಪಟ್ಟ ಅಧಿಕಾರಿಗಳೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತಾಗಲಿ.
ವಂದನೆಗಳೊಂದಿಗೆ, ಇಂತೀ,
ಕೆ.ಎ.ಪಾಲ್ , ಅಧ್ಯಕ್ಷರು, ಸಿಟಿಜನ್ ರೈಟ್ಸ್ ಫೌಂಡೇಷನ್
ಸ್ಥಳ: ಬೆಂಗಳೂರು
ದಿನಾಂಕ: 29.08.2022ಲಗತ್ತು: ಸರ್ಕಾರದ ಅಧಿಕೃತ ವೆಬ್ಸೈಟ್ https://ipgrs.karnataka.gov.in/ ‘ಜನಸ್ಪಂದನ’ ವಿಭಾಗದಲ್ಲಿ ಸರ್ಕಾರ ಅಪ್ಲೋಡ್ ಮಾಡರುವ ದಾಖಲೆಗಳ ಪ್ರತಿಗಳನ್ನು ನಮ್ಮ ಮೂಲ ಅರ್ಜಿಯ ಪ್ರತಿಯೊಂದಿಗೆ ಪರಿಶೀಲನೆಗಾಗಿ ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.