ಬೆಂಗಳೂರು: ಹಠಾತ್ ನಿರ್ಧಾರವೊಂದರಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಜನೋತ್ಸವ ಸಮಾರಂಭವನ್ನು ರದ್ದುಪಡಿಸಲಾಗಿದೆ. ತಡರಾತ್ರಿ ತುರ್ತು ಸುದ್ದಿಗೋಷ್ಠಿ ಕರೆದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ ಭುಗಿಲೆದ್ದಿದೆ. ಈ ಘಟನೆಗೆ ರಾಜ್ಯ ಬಿಜೆಪಿ ಸರ್ಕಾರವೇ ಕಾರಣ ಎಂದು ಹಿಂದೂ ಸಂಘಟನೆಗಳೇ ಆಕ್ರೋಶ ಹೊರ ಹಾಕಿವೆ.
ಗುರುವಾರ ಪ್ರವೀಣ್ ಮೃತದೇಹದ ಅಂತಿಮ ದರ್ಶನ ಪಡೆಯಲು ತೆರಳಿದ್ದ ಸಂಸದರೂ ಆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ವಿರುದ್ದ ಬಿಜೆಪಿ ಕಾರ್ಯಕರ್ತರೇ ರೊಚ್ಚಿಗೆದ್ದಿದ್ದರು. ಈ ನಾಯಕರ ಕಾರುಗಳಿಗೆ ಘೇರಾವ್ ಹಾಕಿದ ಬಿಜೆಪಿ ಸೈನಿಕರು ಕಾರುಗಳನ್ನು ಹಾನಿಗೆಡವುವ ಪ್ರಯತ್ನವನ್ನೂ ಮಾಡಿದರು. ಈ ವೇಳೆ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಈ ಘಟನೆ ಖಂಡಿಸಿರುವ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ಬೊಮ್ಮಾಯಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು. ಈ ಸರ್ಕಾರ ಇದ್ದರೆಷ್ಟು ಬಿದ್ದರೆಷ್ಟು ಎಂಬ ಮಾತುಗಳೂ ಪ್ರತಿಧ್ವನಿಸಿದವು.
ಇದಾದ ಕೆಲವೇ ತಾಸುಗಳಲ್ಲಿ ಜನೋತ್ಸವ ಕಾರ್ಯಕ್ರಮವನ್ನು ರದ್ದು ಪಡಿಸಿರುವ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ.

























































