ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಇಂದು ಆಯೋಜಿಸಿದ್ದ ಜನೋತ್ಸವ ಸಮಾರಂಭವನ್ನು ರದ್ದುಪಡಿಸಿದೆ. ತಡರಾತ್ರಿ ತುರ್ತು ಸುದ್ದಿಗೋಷ್ಠಿ ಕರೆದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ ಭುಗಿಲೆದ್ದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ತೀರ್ಮಾನ ಕೈಗೊಂಡಿದ್ದಾರೆ.
ರಾತ್ರಿ ಬಿಜೆಪಿ ನಾಯಕರು ಹಾಗೂ ಸಂಪುಟ ಸಹೋದ್ಯೋಗಿಗಳ ಜೊತೆ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ತಡ ರಾತ್ರಿವರೆಗೂ ಚರ್ಚೆ ನಡೆಸಿದರು. ಅದಾಗಲೇ, 12.15ಕ್ಕೆ ಸಿಎಂ ಸುದ್ದಿಗೋಷ್ಠಿ ಕರೆಯುವ ಸಂದೇಶ ಮಾಧ್ಯಮಗಳಿಗೆ ರವಾನೆಯಾಯಿತು. ರಾತ್ರೋ ರಾತ್ರಿ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಈ ಹೊತ್ತಲ್ಲಿ ಸುದ್ದಿಗೋಷ್ಠಿ ಕರೆದಿರೋದಕ್ಕೆ ಕ್ಷಮೆಯಾಚಿಸಿದರು. ಪ್ರವೀಣ್ ನೆಟ್ಟಾರ್ ಹತ್ಯೆ ಘಟನೆಯಿಂದ ಬಹಳ ನೋವಾಗಿದೆ ಎಂದ ಅವರು, ಬಿಜೆಪಿ ಆಯೋಜಿಸಿರುವ ಜನೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಹತ್ಯೆಗೀಡಾದ ಪ್ರವೀಣನ ತಾಯಿಯ ಆಕ್ರಂದನ ನೋಡಿ, ಅಳಲನ್ನು ನೋಡಿ ನಾನೇ ಈ ತೀರ್ಮಾನ ಮಾಡಿದೆ ಎಂದ ಅವರು, ಗುರುವಾರ ವಿಧಾನಸೌಧದಲ್ಲಿ ನಡೆಸಲುದ್ದೇಶಿಸಿರುವ ಕಾರ್ಯಕ್ರಮವನ್ನೂ ರದ್ದುಪಡಿಸಲಾಗಿದೆ ಎಂದು ತಿಳಿಸಿದರು.

























































