ಮಂಗಳೂರು: ಬಿಜೆಪಿ ಯುವ ನಾಯಕನ ಕಗ್ಗೊಲೆ ಘಟನೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಉದ್ವಿಗ್ನಗೊಂಡಿದೆ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಅಂತಿಮ ಯಾತ್ರೆ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆಯೇ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಮಂಗಳವಾರ ರಾತ್ರಿ ಪ್ರವೀಣ್ ನೆಟ್ಟಾರು ಕೊಲೆಯಾಗಿದ್ದು, ಈ ಕೃತ್ಯವನ್ನು ಖಂಡಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ. ಈ ಉದ್ವಿಗ್ನತೆಯ ನಡುವೆಯೇ ಬೆಳ್ಳಾರೆಯಲ್ಲಿ ಇಂದು ಪ್ರವೀಣ್ ಮೃತದೇಹದ ಅಂತಿಮ ಯಾತ್ರೆ ನಡೆದಿದೆ. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್, ಶಾಸಕರಾದ ಸಂಜೀವ್ ಮಟಂದೂರ್, ಹರೀಶ್ ಪೂಂಜಾ ಸಹಿತ ಬಿಜೆಪಿ ಮುಖಂಡರು ಮೃತ ಪ್ರವೀಣ್ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ವಿರುದ್ದವೇ ಆಕ್ರೋಶ ಹೊರಹಾಕಿದರು. ನಮ್ಮ ಪಕ್ಷದ ಸರ್ಕಾರವೇ ಇದ್ದರೂ ನಮ್ಮ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಇದಕ್ಕೆ ನಾಯಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕಾರ್ಯಕರ್ತರು ಸಂಸದ ನಳಿನ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲ ಸಂಸದರ ಕಾರಿಗೆ ದಿಗ್ಬಂಧನ ಹಾಕಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.






















































