ಬೆಂಗಳೂರು: ರಾಜ್ಯ ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಈ ಸಂಬಂಧ ಶುಕ್ರವಾರ ಆಯೋಜಿತವಾದ ಬಿಜೆಪಿ ಚಿಂತನ ಸಭೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳುವಂತೆ ಮಾಡಿದೆ.
ಈ ಚಿಂತನ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ಸಹಿತ ಪ್ರಮುಖರು ಭಾಗಿಯಾಗಲಿದ್ದಾರೆ. ಪಕ್ಷ ಸಂಘಟನೆ ವಿಚಾರ, ಪಕ್ಷವನ್ನು ಇನ್ನಷ್ಟು ಬಲಪಡಿಸುವುದು, ಮುಂಬರುವ ಚುನಾವಣೆ ಎದುರಿಸುವ ಕುರಿತು ನಾಳೆ ಚರ್ಚಿಸಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೇರೆ ಬೇರೆ ವಿಷಯಗಳೂ ಚರ್ಚೆಗೆ ಒಳಪಡಬಹುದು. ಮುಕ್ತವಾಗಿ ಚಿಂತನೆಗೆ ನಾವು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ವಿವರಿಸಿದರು.
ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯರು, ಸಚಿವ ಸಂಪುಟದ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. 50ಕ್ಕೂ ಹೆಚ್ಚು ಜನ ರಾಜ್ಯ ಪ್ರಮುಖರೂ ಭಾಗವಹಿಸುವ ಸಭೆ ಇದಾಗಿದೆ.



























































