ಬೆಂಗಳೂರು: ಕರ್ನಾಟಕ ಉಚ್ಚನ್ಯಾಯಾಲಯದ ಕಲಾಪದ ದೃಶ್ಯವನ್ನು ಕಾನೂನುಬಾಹಿರವಾಗಿ ನಕಲು ಮಾಡಿಕೊಂಡು, ಆ ವಿಡಿಯೋವನ್ನು ತನ್ನ ರಾಜಕೀಯ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ಸಿನ ರಾಷ್ಟ್ರೀಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೋರ್ಟ್ ಕಲಾಪದ ವೇಳೆಯಲ್ಲಿ ಇತ್ತೀಚೆಗೆ ಪ್ರಕರಣವೊಂದರ ವಾದ ನಡೆಯುವಾಗ ನ್ಯಾಯಮೂರ್ತಿಗಳು ಭ್ರಷ್ಟರ ವಿರುದ್ಧವಾಗಿ ಮಾತುಗಳನ್ನಾಡಿದ್ದರು, ರಾಹುಲ್ ಗಾಂಧಿಯವರು ಈ ಕೋರ್ಟ್ ಕಲಾಪದ ವಿಡಿಯೋ ನಕಲು ಮಾಡಿ ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿರುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹವು ಆಗಿರುತ್ತದೆ ಎಂದು ಗಮನ ಸೆಳೆಯಲಾಗಿದೆ.
ಈ ಬಗ್ಗೆ ಬೆಂಗಳೂರಿನ ವಕೀಲರಾದ ಎ.ಶ್ರೇಯಸ್ ಎಂಬರವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಹಾಗೂ ಈ ಬಗ್ಗೆ ರಾಹುಲ್ ಗಾಂಧಿಯವರ ವಿರುದ್ಧ ನ್ಯಾಯಾಲಯದ ಕ್ರಿಮಿನಲ್ ನಿಂದನೆ (ಕ್ರಿಮಿನಲ್ ಕಂಟೆಮ್ಟ್) ಅಪರಾಧದ ಅಡಿಯಲ್ಲಿ ಸೂಕ್ತ ಕ್ರಮಕ್ಕಾಗಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾದೀಶರಿಗೆ, ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೂ ದೂರು ಸಲ್ಲಿಸಲಾಗಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೊಡಘಟ್ಟ ತಿಳಿಸಿದ್ದಾರೆ.







































































