ಬೆಂಗಳೂರು: ಮೇಕೆದಾಟು ಯಾತ್ರೆ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಕಾಂಗ್ರೆಸ್ ಪಕ್ಷ ಇದೀಗ ಮಹಾದಾಯಿ ಯಾತ್ರೆಗೆ ಸಜ್ಜಾಗಿದೆ. ಈ ಮಹಾದಾಯಿ ಯಾತ್ರೆ ಮೂಲಕ ಉತ್ತರ ಕರ್ನಾಟಕದ ಜನರ ಮನಗೆಲ್ಲಲು ಕೈ ನಾಯಕರು ತಯಾರಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಕೆಪಿಸಿಸಿ ಗೌರವಾಧ್ಯಕ್ಷ ಈಶ್ವರ ಖಂಡ್ರೆ, ಮಹಾದಾಯಿ ಯಾತ್ರೆಯ ರೂಪುರೇಷೆಗೆಳನ್ನು ನಾವು ತಯಾರು ಮಾಡಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಆ ಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದು, ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಮಾಡುತ್ತೇವೆ ಎಂದರು.
ಮಾರ್ಚ್ ತಿಂಗಳಲ್ಲಿ ಕೋವಿಡ್ ನಿಯಮಾವಳಿಗಳಿದ್ದವು, ಮೇಕೆದಾಟು ಪಾದಯಾತ್ರೆ ಆರಂಭವಾಗಿತ್ತು, ಈ ಯಾತ್ರೆ ಯಾವ ರೀತಿ ಮಾಡಬೇಕು ಎಂದು ಎರಡು ಬಾರಿ ಚರ್ಚೆ ಆಗಿದೆ. ರಾಜ್ಯಮಟ್ಟದ ಎಲ್ಲ ನಾಯಕರು ಭಾಗಿಯಾಗುವ ವಿಚಾರ ವ್ಯಕ್ತವಾದ ನಂತರ, ದಿನಾಂಕ ನಿಗದಿ ಮಾಡಿ, ಈ ಯಾತ್ರೆ ಮಾಡುತ್ತೇವೆ ಎಂದವರು ತಿಳಿಸಿದರು.
ಈ ಯಾತ್ರೆ ವಿಚಾರದಲ್ಲಿ ಯಾವುದೇ ನಾಯಕತ್ವ ಸಮಸ್ಯೆ ಇಲ್ಲ. ನಮ್ಮಲ್ಲಿ ಯಾವುದೇ ನಾಯಕತ್ವದ ಗೊಂದಲ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ಸುರ್ಜೆವಾಲ ಅವರು ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಉಸ್ತುವಾರಿಯಾಗಿ ನಾನಿದ್ದು, ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದು, ನಾವೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಆ ಭಾಗದ ಎಲ್ಲ ಶಾಸಕರು, ಪರಾಜಿತ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು. ಜನಾಶಿರ್ವಾದದಿಂದ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನೆಲ್ಲಾ ಅಭಿವೃದ್ಧಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡುತ್ತೇವೆ’ ಎಂದು ತಿಳಿಸಿದರು.