ಬೆಂಗಳೂರು: ಜೆಡಿಎಸ್ ಪಕ್ಷ ಜನತಾ ಜಲಧಾರೆ ಮತ್ತು ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಕೀಳು ಅಭಿರುಚಿಯ ಟೀಕೆ ಮಾಡಿರುವ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಪಂಚರತ್ನ ಕಾರ್ಯಕ್ರಮವನ್ನು ಇಟ್ಟುಕೊಂಡು ಜೆಡಿಎಸ್ ವಿರುದ್ಧ ಹಾಗೂ ನಮ್ಮ ಕುಟುಂಬದ ಬಗ್ಗೆ ಬಿಜೆಪಿಗರು ಟ್ವೀಟ್ ಮಾಡಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ನಿಖಿಲ್, ಪ್ರಜ್ವಲ್ ಏನೂ ಎನ್ನುವುದು ಈ ನಾಡಿಗೆ ಗೊತ್ತಿದೆ. ನಿಜವಾದ ಪಂಚರತ್ನಗಳು ನಾವೇ. ಇದನ್ನು ಸಾಬೀತುಪಡಿಸುವುದೇ ನಮ್ಮ ಸವಾಲು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಮಲ ಪಾಳಯಕ್ಕೆ ತಿರುಗೇಟು ನೀಡಿದ್ದಾರೆ.
ಯಶವಂತಪುರದಲ್ಲಿರುವ ಅರವಿಂದ ಮೋಟಾರ್ಸ್ ಅಧಿಕಾರಿಗಳು ಇಂದು ಪಂಚರತ್ನ ಕಾರ್ಯಕ್ರಮಕ್ಕೆ ಬಳಸಲಾಗುವ 123 ಎಲ್ ಇ ಡಿ ವಾಹನಗಳ ಹಸ್ತಾಂತರ ಸಮಾರಂಭದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಪಂಚರತ್ನ ಕಾರ್ಯಕ್ರಮಗಳ ಎಂಬ ಬಗ್ಗೆ ಬಿಜೆಪಿ ಟೀಕೆ ಮಾಡಿದೆ. ಲೇವಡಿ ಮಾಡುವ ಮೂಲಕ ಬಿಜೆಪಿಯವರು ನಮ್ಮ ಕುಟುಂಬಕ್ಕೆ ಗೌರವ ನೀಡಿದ್ದಾರೆ. ಇದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ದೇವೇಗೌಡರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. 123 ಅಭ್ಯರ್ಥಿಗಳು ಇದ್ದಾರಾ? ಅಂತಾ ಟ್ವೀಟ್ ಮಾಡಿದ್ದಾರೆ. ಹೀಗೆ ಪ್ರಶ್ನೆ ಮಾಡುವ ಇವರು ಅಧಿಕಾರಕ್ಕಾಗಿ ಇವರು ಯಾಕೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಇವರ ಯೋಗ್ಯತೆಗೆ ಶಾಸಕರ ಸಂಖ್ಯೆ ಇಲ್ಲದೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯಲು ಏನೇನು ಮಾಡಿದರು? ಎನ್ನುವುದು ಗೊತ್ತಿದೆ. ನಾಚಿಕೆ ಆಗೋದಿಲ್ಲವಾ ಟ್ವೀಟ್ ಮಾಡಲು. ಸರ್ಕಾರ ತರಲು ಇವರು ಏನೆಲ್ಲಾ ಅಕ್ರಮ ಮಾರ್ಗ ಹಿಡಿದರು ಅನ್ನುವುದು ಗೊತ್ತಿದೆ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಈ ಟ್ವೀಟ್ ಮಾಡಿದ ಜನ ಸಿಕ್ಕಿದನ್ನೆಲ್ಲಾ ಲೂಟಿ ಮಾಡುತ್ತಿದ್ದಾರೆ. ಹಿಟಾಚಿ ಇಟ್ಟುಕೊಂಡು ಲೂಟಿ ಮಾಡುತ್ತಿದ್ದಾರೆ. ರಾಜರಾಜೇಶ್ವರಿ ನಗರಕ್ಕೆ ಮುಖ್ಯಮಂತ್ರಿಗಳು ಪ್ರದಕ್ಷಿಣೆಗೆ ಹೋಗಿದ್ದಾರೆ. ಸಿಎಂ ಯಾಕೆ ಹೋದರು ಹೇಳಿ? ದಾಖಲೆಗಳಿಗೆ ಬೆಂಕಿ ಇಟ್ಟು ಲೂಟಿ ಹೊಡೆದಿರುವವರು ಇವರು. ಮಲ್ಲೇಶ್ವರಂನಲ್ಲಿ ದಾಖಲೆಗಳನ್ನು ಏನು ಮಾಡಿದರು? ಕೆರೆ, ಕಟ್ಟೆ ನುಂಗಿರೋದನ್ನೆಲ್ಲಾ ಕಕ್ಕಿಸಲು ನಾವು ಹೊರಟಿದ್ದೇವೆ ಎಂದು ಕುಮಾರಸ್ವಾಮಿ ಗುಡುಗಿದರು.
ನಾನು ಲಕ್ಕಿ ಡಿಪ್ ಸಿಎಂ. ರಾಜ್ಯಕ್ಕೆ ಅಭಿವೃದ್ಧಿ ಕೊಟ್ಟಿದ್ದೇನೆ. ಲಕ್ಕಿ ಡಿಪ್ ಸಿಎಂ ಆಗಿ ಬೆಂಗಳೂರಿಗೆ ಕೆಲಸ ಮಾಡಿದ್ದೇನೆ ಎಂದ ಹೆಚ್ ಡಿಕೆ, ಬೆಂಗಳೂರು ನಗರವನ್ನು ಏಳು ಜನ ಸಚಿವರು ಗುಡಿಸಿ ಗುಂಡಾಂತರ ಮಾಡಿದ್ದಾರೆ. ಲಘುವಾಗಿ ಮಾತನನಾಡುವ ಬಿಜೆಪಿಯವರಿಗೆ ಎಚ್ಚರಿಕೆ ನೀಡುತ್ತೇನೆ. ನಮ್ಮದು ಕುಟುಂಬ ರಾಜಕಾರಣ ಅಂತಾರೆ, ಬಿಜೆಪಿಯಲ್ಲಿ ಎಷ್ಟು ಜನ ಕುಟುಂಬ ರತ್ನಗಳಿಲ್ಲ ಹೇಳಿ? ಇವರಿಗೆ ನಾವು ಏನು ಅನ್ನುವುದನ್ನು ಈ ಸಲ ತೋರಿಸುತ್ತೇವೆ ಎಂದು ತಿರುಗೇಟು ನೀಡಿದರು.
ನಾನು ಸುಮ್ಮನೆ ಕೂರುವುದಿಲ್ಲ . ಮೂರು ವರ್ಷ ಮೌನಕ್ಕೆ ಒಳಗಾಗಿದ್ದೆ. ಇನ್ನು ಯುದ್ಧ ಈಗ ಪ್ರಾರಂಭವಾಗಲಿದೆ. ಉತ್ತರ ಪ್ರದೇಶದಂತೆ ಕರ್ನಾಟಕ ಅಲ್ಲ. ಇಲ್ಲಿನವರು ಕೇಂದ್ರ ನಾಯಕರ ಹೆಸರಿನಲ್ಲಿ ಮತ ಕೇಳಬೇಕು ಅಷ್ಟೇ. ನನ್ನ ರೀತಿ ಇವರ ಬಳಿ ಪಂಚರತ್ನ ಯೋಜನೆಗಳಿವೆಯಾ? ಎಂದು ಬಿಜೆಪಿ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸ್ವಿಮ್ಮಿಂಗ್ ಪೂಲ್ ಮಾಡಿರೋದನ್ನು ಜನರೇ ಪ್ರಶ್ನಿಸುತ್ತಿದ್ದಾರೆ. ಕೆರೆಯನ್ನು ನುಂಗಿ ಜೆಪಿ ನಗರ, ಡಾಲರ್ಸ್ ಕಾಲೋನಿಯನ್ನ ಮಾಡಿದ್ದಾರೆ. ಇದರಿಂದ ಜನರು ಕಂಗೆಡುವಂತಾಗಿದೆ. ಕಳೆದ 2006-07ರಲ್ಲಿ ಪುಟ್ಟೇನಹಳ್ಳಿ ನಿವಾಸಿಗಳ ಅನುಕೂಲಕ್ಕಾಗಿ ನಿರ್ಧಾರ ಕೈಗೊಂಡೆ. ಅದರಿಂದ ಅಲ್ಲಿನ ನಿವಾಸಿಗಳು ಇಂದು ನೆಮ್ಮದಿಯಿಂದ ಬದುಕುತ್ತಿದ್ದಾರೆ.
ಆದರೆ, ನನಗೆ ನೂರು ಓಟ್ ಬಿಜೆಪಿಗೆ ಆರು ನೂರು ಓಟ್ ಕೊಟ್ಟಿದ್ದಾರೆ. ನಾನು ಕೆಲಸ ಮಾಡಿದ್ದಕ್ಕೆ ಸಿಕ್ಕಿದ ಮತಗಳು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಟ್ವೀಟ್ ಮಾಡೋದು ಸುಲಭ. ಹುಡುಗಾಟಿಕೆಗಾಗಿ ಪಂಚರತ್ನ ಯೋಜನೆ ಹಮ್ಮಿಕೊಂಡಿಲ್ಲ. ಅದನ್ನು ಸಮಾವೇಶದ ಮೂಲಕ ನಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದೇವೆ. ಜಲಧಾರೆ ಸಮಾವೇಶದಿಂದ ಕಾಂಗ್ರೆಸ್, ಬಿಜೆಪಿಗೆ ನಡುಕ ಶುರುವಾಗಿದೆ. ಕೆಲವರು ಪಕ್ಷ ಬಿಟ್ಟು ಹೋಗಲು ಮುಂದಾಗಿದ್ದಾರೆ. ಅದನ್ನು ನಾನು ತಡೆಯಲು ಆಗುತ್ತಾ ?. ಹೋಗೋರು ಹೋಗಲಿ. ಬಸವರಾಜ ಹೊರಟ್ಟಿ ಅವರನ್ನು ನಾನೇ ಸಂತೋಷವಾಗಿ ಕಳುಹಿಸಿ ಕೊಟ್ಟಿದ್ದೇನೆ. ಪಕ್ಷ ಬಿಡುವಾಗ ದೇವೇಗೌಡರನ್ನು ಸ್ಮರಿಸಿದ್ದಾರೆ. ಅವರಾದರೂ ನಮ್ಮ ಕುಟುಂಬದ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ನಮ್ಮ ಪಕ್ಷದಲ್ಲೇ ಹೆಚ್ಚುವರಿ ಮತಗಳು ಇವೆ. ಕಾಂಗ್ರೆಸ್, ಬಿಜೆಪಿಗಿಂತಲೂ ನಮ್ಮ ಪಕ್ಷದಲ್ಲೇ ಹೆಚ್ಚುವರಿ ಮತಗಳು ಇವೆ. ಪಕ್ಷದ ಶಾಸಕರೂ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಹೇಳಿದ್ದಾರೆ. ನೋಡೋಣ ಅವಿರೋಧವಾಗಿ ಆಯ್ಕೆಯಾದರೂ ಆಗಬಹುದು ಎಂದರು.
ವಿಧಾನಪರಿಷತ್ ಸದಸ್ಯ ಸ್ಥಾನದ ಮೇಲೆ ಸಿ.ಎಂ. ಇಬ್ರಾಹಿಂ ಕಣ್ಣಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ ಅವರು, ಸಿ.ಎಂ.ಇಬ್ರಾಹಿಂ ಕೂಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆದರೆ, ಈಗಾಗಲೇ ಅವರಿಗೆ ಅಧ್ಯಕ್ಷ ಸ್ಥಾನವನ್ನೇ ಕೊಟ್ಟಿದ್ದೇವೆ. ಪರೋಕ್ಷವಾಗಿ ಇಬ್ರಾಹಿಂಗೆ ಪರಿಷತ್ ಸದಸ್ಯ ಸ್ಥಾನ ನಿರಾಕರಿಸಿದರು.
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಇದ್ದಾರೆ. ಯಾರಿಗೆ ಕೊಡಬೇಕು ಅನ್ನುವುದನ್ನು ಇಂದು ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.