ವಿಜಯಪುರ: ಆಗಾಗ್ಗೆ ಒಂದಿಲ್ಲೊಂದು ಸ್ಫೋಟಕ ಹೇಳಿಕೆಗಳನ್ನು ನೀಡುತ್ತಾ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮತ್ತೊಂದು ಹೇಳಿಕೆ ನೀಡಿ ಬಿಜೆಪಿ ನಾಯಕರ ಹುಬ್ಬೇರುವಂತೆ ಮಾಡಿದ್ದಾರೆ. ಸಚಿವ ಈಶ್ವರಪ್ಪ ರಾಜೀನಾಮೆ ಪ್ರಹಸನದ ಹಿಂದೆ ದೊಡ್ಡ ಕುತಂತ್ರ ನಡೆದಿದೆ ಎಂದಿರುವ ಅಗರು, ಕಾಂಗ್ರೆಸ್ ಪಕ್ಷದ ಮಹಾನಾಯಕನ ಜತೆಗೆ ನಮ್ಮ ಪಕ್ಷದ ಯುವ ನಾಯಕನೊಬ್ಬ ಸೇರಿ ಕುತಂತ್ರ ಹಣೆದಿದ್ದಾರೆ ಎಂದು ದೂರಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈಶ್ವರಪ್ಪ ಪ್ರಕರಣ ಕುರಿತಂತೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಈ ಪ್ರಕರಣವನ್ನು ರಾಜಕೀಯ ಪಿತೂರಿ ಎಂದು ಬಣ್ಣಿಸಿದರಲ್ಲದೆ, ತಮ್ಮದೇ ಪಕ್ಷದ ನಾಯಕ ಕೈವಾಡವಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜಕೀಯವಾಗಿ ಹತಾಶರಾಗಿರುವ ಕಾಂಗ್ರೆಸ್ ನಾಯಕರು ಇಂಥ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ದೂರಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ರವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು. ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಯಲ್ಲಿ ಸತ್ಯವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ-ಕಾಂಗ್ರೆಸ್ ಪಕ್ಷಗಳಲ್ಲಿ ನಕಲಿ ಸಿಡಿ ತಯಾರಿಕೆಯ ಫ್ಯಾಕ್ಟರಿ ಇವೆ ಎಂದು ಹೇಳುತ್ತಲಿರುವ ಯತ್ನಾಳ್ ಇದೀಗ ಮತ್ತೆ ಈ ರೀತಿಯ ಹೇಳಿಕೆಯನ್ನು ಪುನರುಚ್ಛರಿಸಿದರು. ನಕಲಿ ಸಿಡಿ, ಎಡಿಟ್ ಸಿಡಿ ರೂಪಿಸುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲೂ ಸಕ್ರಿಯ ತಂಡಗಳಿವೆ. ಎರಡೂ ಪಕ್ಷಗಳಲ್ಲಿ ಈ ನಾಯಕರ ನಕಲಿ ಸಿ.ಡಿ ತಯಾರಿಕೆ ಫ್ಯಾಕ್ಟರಿಯೇ ಇವೆ. ಬೆಂಗಳೂರಿನಲ್ಲಿ ಇಂಥ ಸಿ.ಡಿ ಗಳನ್ನು ಇಟ್ಡುಕೊಂಡು ಬ್ಲ್ಯಾಕ್ ಮೇಲ್ ಮಾಡುವಲ್ಲಿ ಈ ತಂಡಗಳು ಸಕ್ರಿಯವಾಗಿವೆ. ಈಶ್ವರಪ್ಪ ಪ್ರಕರಣದಲ್ಲೂ ಈ ಎರಡೂ ತಂಡಗಳ ಕೈವಾಡವಿದೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದರು.