ದೆಹಲಿ: ಬಿಟ್ ಕಾಯಿನ್ ಕರ್ಮಕಾಂಡ ಹಾಗೂ ಹ್ಯಾಕಿಂಗ್ ಅವಾಂತರ ರಾಜ್ಯ ಬಿಜೆಪಿ ಹಾಗೂ ಸರ್ಕಾರದ ಮಟ್ಟದಲ್ಲಿ ಭಾರೀ ಬದಲಾವಣೆ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜೀನಾಮೆ ಸಾಧ್ಯತೆಗಳ ಕುರಿತಂತೆಯೂ ಬಿಜೆಪಿ ಕಚೇರಿಯ ಮೊಗಸಾಲೆಯಲ್ಲಿ ಪಿಸು ಮಾತುಗಳು ಕೇಳಿ ಬಂದಿವೆ. ಅದರಲ್ಲೂ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಕಮಲ ಪಾಳಯದ ಬೆಳವಣಿಗೆ ಬಗ್ಗೆ ಕಾದು ನೋಡುತ್ತಲೇ ಇದ್ದಾರೆ.
ಈ ನಡುವೆ, ದೆಹಲಿ ಭೇಟಿಯಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಿದ್ಯಮಾನಗಳಿಗೆ ರೋಚಕತೆ ತುಂಬಿದ್ದಾರೆ. ಪ್ರಧಾನಿ ಕಚೇರಿಯಿಂದ ಸಿಎಂ ಅವರಿಗೆ ಬಂದಿರುವ ಗೌಪ್ಯ ಸಂದೇಶ ಹಾಗೂ ಜೆಪಿ ನಡ್ಡಾ ಪಾಳಯದಿಂದ ಬಂದಿರುವ ಸಲಹೆಗಳಿಂದಾಗಿ ಸಿಎಂ ಅವರು ಇಂದು ಬೆಳಗ್ಗಿನವರೆಗೂ ತಲೆಕೆಡಿಸಿಕೊಂಡಿದ್ದರು. ಆದರೆ ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಬಸವರಾಜ್ ಬೊಮ್ಮಾಯಿ, ತವು ಉಪಚುನಾವಣಾ ಫಲಿತಾಂಶ ಬಗ್ಗೆ ಮೋದಿಯವರ ಗಮನಕ್ಕೆ ತಂದಿದ್ದಾಗಿಯೂ, ಮುಂದೆ ಯಾವ ರೀತಿ ಪಕ್ಷದ ಹಿತಕ್ಕನುಗುಣವಾಗಿ ಕೆಲಸ ಮಾಡಬೇಕೆಂಬ ಬಗ್ಗೆ ಸಲಹೆ ಪಡೆದಿದುವುದಾಗಿ ಮಾಹಿತಿ ಹಂಚಿಕೊಂಡರು.
ಪ್ರಧಾನಿ ಭೇಟಿ ವೇಳೆ ಬಿಟ್ ಕಾಯಿನ್ ಕೇಸ್ ಬಗ್ಗೆ ಯಾವುದೇ ಮಹತ್ವದ ಚರ್ಚೆ ಆಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಇದೇ ವೇಳೆ ಟ್ವೀಟ್ ಮಾಡಿರುವ ಸಿಎಂ, ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ರಾಜ್ಯದ ಹಲವು ಅಭಿವೃದ್ಧಿ ವಿಷಯಗಳ ಕುರಿತು ಮಾತುಕತೆ ನಡೆಸಲಾಯಿತು ಎಂದಷ್ಟೆ ಪೋಸ್ಟ್ ಹಾಕಿದ್ದಾರೆ.
ಇಂದು ನವದೆಹಲಿಯಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರನ್ನು ಭೇಟಿ ಮಾಡಿ ರಾಜ್ಯದ ಹಲವು ಅಭಿವೃದ್ಧಿ ವಿಷಯಗಳ ಕುರಿತು ಮಾತುಕತೆ ನಡೆಸಲಾಯಿತು.@narendramodi @CMofKarnataka pic.twitter.com/dlFKXju8Gb
— Basavaraj S Bommai (Modi Ka Parivar) (@BSBommai) November 11, 2021
‘ಬಿಟ್’ ವಿಚಾರಗಳತ್ತ ಅನುಮಾನಗಳ ಹುತ್ತ..!
ಬಿಟ್ ಕಾಯಿನ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕಿಂಗ್ ವಿಚಾರ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಸಕ್ತ, ಈ ವಿಚಾರ ಅಮೇರಿಕಾ ಹಾಗೂ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಬಲ್ಲ ಸಂಗತಿ. ಎಫ್‌ಬಿಐ ಕೂಡಾ ಈ ಕೇಸ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ವಿಶ್ವದ ಹಿರಿಯಣ್ಣನೆನಿಸಿರುವ ಅಮೆರಿಕಾ ಮುಂದೆ ದೇಶದ ಮಾನ ಹರಾಜು ಮಾಡಿರುವ ಈ ‘ಬಿಟ್’ ಕೇಸ್ ಬಗ್ಗೆ ಸ್ವತಃ ಪ್ರಧಾನಿ ಅವರೇ ತಲೆಕೆಡಿಸಿಕೊಂಡಿದ್ದಾರೆ.
ಈ ನಡುವೆ, ‘ಬಿಟ್’ ಕೇಸ್ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆರಂಭವಾದ ನಂತರ ಮೋದಿ-ಬೊಮ್ಮಾಯಿ ನಡುವೆ ಇದು ಮೊದಲ ಭೇಟಿಯಾಗಿದೆ. ಈ ಭೇಟಿಯ ಸಂಧರ್ಭದಲ್ಲಿ ಪ್ರಕರಣದ ಬಗ್ಗೆ ಕುತೂಹಲಕ್ಕಾಗಿಯಾದರೂ ಪ್ರಧಾನಿಯವರು ಗುಪ್ತ್ ಚರ್ಚೆ ಮಾಡಿರಲಿಕ್ಕಿಲ್ಲವೇ? ಈ ಪ್ರಕರಣವು ಪದೇ ಪದೇ, ಗಂಭೀರ ಸ್ವರೂಪ ತಾಳುತ್ತಿರುವುದರಿಂದ ಸಂಬಂಧಿತ ರಾಜ್ಯದ ದೊರೆಯಾದ ಬೊಮ್ಮಾಯಿ ಅವರಾದರೂ ಪಿಎಂ ಜೊತೆ ಮಾಹಿತಿ ಹಂಚಿಕೊಳ್ಳಲೇಬೇಕು. ಒಂದು ವೇಳೆ, ಸಿಎಂ ಹೇಳಿದಂತೆ ‘ಬಿಟ್’ ಬಗ್ಗೆ ಹೆಚ್ಚಿನ ಚರ್ಚೆ ನಡೆದಿಲ್ಲ ಎಂದಾದರೆ, ಒಟ್ಟಾರೆ ವಿದ್ಯಮಾನಗಳ ಬಗ್ಗೆ ಅನುಮಾನಗಳು ಹೆಚ್ಚಾಗಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.