ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ ಬಿಟ್ ಕಾಯಿನ್ ಅಕ್ರಮ ಹಾಗೂ ಹ್ಯಾಕಿಂಗ್ ಅವಾಂತರಗಳು ಆಡಳಿತ ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರ ಹೆಸರಿದ್ದರೂ ಕಾಂಗ್ರೆಸ್‌ನವರತ್ತ ಕಮಲ ನಾಯಕರು ಬೊಟ್ಟು ಮಾಡುತ್ತಿದ್ದಾರೆ ಎಂಬ ಆರೋಪ ಪ್ರತಿಪಕ್ಷದ್ದು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ್ ಬೊಮ್ಮಾಯಿ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಮೊದಲಾದವರು ಬಿಟ್ ಕಾಯಿನ್ ಪ್ರಕರಣ ವಿಚಾರದಲ್ಲಿ ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾದವರ ಹೆಸರುಗಳು ಗೊತ್ತಿದ್ದರೆ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಪ್ರಕರಣವನ್ನು ಸಿಬಿಐ, ಇ.ಡಿ.ಗೆ ವಹಿಸಿರುವುದಾಗಿ ಹೇಳಿದ್ದಾರೆ. ಗೃಹಸಚಿವ ಅರಗ ಜ್ಞಾನೇಂದ್ರರ ಹೇಳಿಕೆ ಕೂಡಾ ಕಾಂಗ್ರೆಸ್ ನಾಯಕರನ್ನು ಕೆರಳುವಂತೆ ಮಾಡಿದೆ.
ಕಾಂಗ್ರೆಸ್ ಎದಿರೇಟು..
ಈ ವಿಚಾರದಲ್ಲಿ ಬಿಜೆಪಿ ನಾಯಕರ ವಿರುದ್ದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗುತ್ತಿರುವಂತೆಯೇ, ಮತ್ತೊಂದೆಡೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿಂದು ನೀಡಿದ ಪ್ರತಿಕ್ರಿಯೆ ಗಮನಸೆಳೆದಿದೆ.
‘ಹಳೇ ಪ್ರಕರಣವನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರ ಘನತೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಈ ರೀತಿ ಕಾಂಗ್ರೆಸ್ ನಾಯಕರ ಘನತೆಗೆ ಧಕ್ಕೆ ತರಲು ಸಾಧ್ಯವಿಲ್ಲ. ನಮ್ಮ ಬಳಿಯೂ ಕೆಲವು ಮಾಹಿತಿಗಳಿವೆ, ಸೂಕ್ತ ಸಮಯದಲ್ಲಿ ನಾವು ಮಾತನಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಇಡೀ ಹಗರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಪ್ರಕರಣದ ವಿಚಾರಣೆಯನ್ನು ಇ.ಡಿ.ಗೆ ಹಸ್ತಾಂತರ ಮಾಡಲಾಗಿದೆ ಎಂಬುದು ಮುಖ್ಯಮಂತ್ರಿಗಳ ಹೇಳಿಕೆ. ಈಗ ಅವರು ಕೆಲವು ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಹಳೇ ಪ್ರಕರಣದವನ್ನು ಉಲ್ಲೇಖಿಸಿ ದಾರಿ ತಪ್ಪಿಸುತ್ತಿದ್ದಾರೆ. ಇದೇ ರೀತಿ ಹಲವು ವದಂತಿಗಳನ್ನು ಹರಿಯಬಿಡಲಾಗಿದೆ ಎಂದವರು ಆಡಳಿತ ಪಕ್ಷದ ವಿರುದ್ದ ಹರಿಹಾಯ್ದರು.
ಪತ್ರ ಸೃಷ್ಟಿಸಿದ ಸಂಚಲನ..
ಪ್ರಧಾನ ಮಂತ್ರಿಗಳಿಗೆ ಜನಸಾಮಾನ್ಯ ಬರೆದ ದೂರಿನ ಪತ್ರವನ್ನು ಓದಿದ್ದೇನೆ. ಅದರಲ್ಲಿ ಅನೇಕ ಬಿಜೆಪಿ ನಾಯಕರ ಹೆಸರುಗಳಿವೆ. ಅದು ನಿಜವೇ? ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ, ಇಲ್ಲವೇ? ಅವರ ಹೆಸರುಗಳನ್ನು ಬಹಿರಂಗ ಪಡಿಸಲಿ. ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಪೊಲೀಸ್ ಅಧಿಕಾರಿಗಳು ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿರುವಾಗ, ಈ ವಿಚಾರವನ್ನು ಜನರ ಮುಂದೆ ಇಡುವುದು ಸರ್ಕಾರದ ಜವಾಬ್ದಾರಿ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.
ತಮ್ಮ ನಾಯಕರ ಹೆಸರು ಮುಚ್ಚಿಟ್ಟು, ಕಾಂಗ್ರೆಸ್ ನಾಯಕರ ಹೆಸರು ತಳುಕು ಹಾಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಅದೇ ರೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಹೆಸರೂ ಹೊರಬರಬೇಕು. ಬಿಜೆಪಿ ನಾಯಕರು, ಮಂತ್ರಿಗಳೇ ಈ ವಿಚಾರವಾಗಿ ಮಾಧ್ಯಮಗಳು ಹಾಗೂ ಕಾಂಗ್ರೆಸ್ ನಾಯಕರಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರು, ಅವರ ಮಕ್ಕಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಡಿಕೆಶಿ ಹೊಸ ಬಾಂಬ್ ಸಿಡಿಸಿದರು.
ಬಿಜೆಪಿಯಲ್ಲಿ ಭಿನ್ನಮತ, ಆಂತರಿಕ ಜಗಳ ಸಾಮಾನ್ಯ. ಹೀಗಾಗಿ ನಮಗೆ ಕೇಳಿ ಬಂದಿರುವ ಬಿಜೆಪಿ ನಾಯಕರ ಹೆಸರುಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ತನಿಖೆ ಸರಿಯಾದ ಮಾರ್ಗದಲ್ಲಿ ನಡೆದು ನಮಗೆ ಸತ್ಯಾಂಶ ಹೊರಬರಬೇಕಿದೆ. ಆದರೆ ಬಿಜೆಪಿ ಈ ಪ್ರಕರಣದಲ್ಲಿ ತನ್ನ ನಾಯಕರನ್ನು ರಕ್ಷಿಸಿ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಹೊರಿಸುವ ರೀತಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ ಎಂದವರು ಹೇಳಿದರು.
ಬಂಧಿಸಲು ತಡವೇಕೆ?
ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಸುದ್ದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದರೆ, ಅವರನ್ನು ಬಂಧಿಸಲು ತಡ ಮಾಡುತ್ತಿರುವುದೇಕೆ? ಕೂಡಲೇ ಬಂಧಿಸಲಿ. ಸಮಯ ವ್ಯರ್ಥ ಮಾಡುವುದೇಕೆ? ಎಂದು ಪ್ರಶ್ನಿಸಿದರಲ್ಲದೆ, ಅವರು ಯಾವ ರೀತಿ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಿ. ಆರೋಪಿ ಸ್ನೇಹಿತನಾಗಿದ್ದ ಮಾತ್ರಕ್ಕೆ ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ. ಇದು ಬೆಂಗಳೂರು, ಕರ್ನಾಟಕ ರಾಜ್ಯದ ಘನತೆಯ ವಿಚಾರ. ಹೀಗಾಗಿ ಈ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ’ ಎಂದರು.
ಈ ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಹಣ್ಣು ತಿಂದವರು ಯಾರೋ, ಸಿಪ್ಪೆ ತಿಂದವರು ಯಾರೋ, ಮೂತಿಗೆ ಒರೆಸಿದವರು ಯಾರೋ, ಎಲ್ಲವೂ ಮುಂದೆ ಗೊತ್ತಾಗುತ್ತದೆ’ ಎಂದು ವಿಶ್ಲೇಷಿಸಿದರು.
ಸಿಎಂ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ,’ಮುಖ್ಯಮಂತ್ರಿಗಳು ಯಾಕೆ ಹೋದರೊ, ಏನು ಗುಸುಗುಸು ನಡೆಯುತ್ತಿದೆಯೋ, ಅವರ ಪಕ್ಷದ ನಾಯಕರೇ ಕರೆ ಮಾಡಿ, ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಆ ವಿಚಾರ ಮಾತನಾಡುವುದು ಬೇಡ’ ಎಂದರು.
ಬಿಟ್ ಕಾಯಿನ್ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ಧೈರ್ಯ ತುಂಬಿದ್ದಾರೆ ಎಂಬ ಬೊಮ್ಮಾಯಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ಬಹಳ ಸಂತೋಷ. ಆ ಪ್ರಕರಣದ ವಿಚಾರವನ್ನು ಜನರ ಮುಂದೆ ಬಿಚ್ಚಿಡಲಿ. ಈ ವಿಚಾರವನ್ನು ಪ್ರಧಾನಿ ಮುಂದೆ ಇವರು ಪ್ರಸ್ತಾಪ ಮಾಡಿದ್ದೇಕೆ? ಅವರು ಯಾಕೆ ತಲೆಕೆಡಿಸಿಕೊಳ್ಳಬೇಡಿ ಎಂದರು. ಯಾರಿಗಾದರೂ ತೊಂದರೆ, ಲಾಸ್ ಆಗಿದೆಯಾ? ಹೊರ ರಾಷ್ಟ್ರಗಳ ಹಣ ಹೋಗಿದೆಯಾ? ಅವರ ಹಸ್ತಕ್ಷೇಪ ಇದೆಯಾ? ಪ್ರಕರಣ ಹೇಗೆ ನಡೆದಿದೆ? ಯಾಕೆ ಬಂಧಿಸಿ ವಿಚಾರಣೆ ಮಾಡಿದರು? ಬಿಟ್ ಕಾಯಿನ್ ವಿಚಾರದಲ್ಲೇ ಯಾಕೆ ಎಫ್ಐಆರ್ ದಾಖಲಿಸಿದರು? ಎಲ್ಲ ಮಾಹಿತಿ ನೀಡಿ ಸ್ಪಷ್ಟತೆ ನೀಡಲಿ. ಕೆಲವು ಮಾಹಿತಿಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದೇಕೆ?’ ಎಂದು ಡಿಕೆಶಿ ಪ್ರಶ್ನೆಗಳ ಸುರಿಮಳೆಗೈದರು
ಮಾಮನಿ ಅವರು ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿರುವ ಹೆಸರುಗಳ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ? ಅದು ಸತ್ಯವೋ? ಸುಳ್ಳೋ ಎಂದು ನಾನು ಹೇಳುವುದಿಲ್ಲ. ಇದೆಲ್ಲವೂ ತನಿಖೆಯಾಗಬೇಕಲ್ಲವೇ?’ ಎಂದವರು ಆಗ್ರಹಿಸಿದರು.