ಕಲಬುರಗಿ: ಭೂಕಂಪನದಿಂದ ತತ್ತರಿಸಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಬರುವ ನವೆಂಬರ್ 11ರಂದು ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೈಗಾರಿಕಾ ಅದಾಲತ್, ಉದ್ಯಮಿಯಾಗು ಉದ್ಯೋಗ ನೀಡು, ವಿಜನ್-2050, ಕೆ.ಡಿ.ಪಿ. ತ್ರೈಮಾಸಿಕ ಸಭೆಗೆ ಪೂರ್ವಭಾವಿ ಹಾಗೂ ಗಡಿಕೇಶ್ವಾರ ಗ್ರಾಮ ವಾಸ್ತವ್ಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಅಂದು ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಅಲ್ಲಿಯೆ ರಾತ್ರಿ ವಾಸ್ತವ್ಯ ಮಾಡಲಾಗುವುದು. ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಚಿಂಚೋಳಿ ತಹಶೀಲ್ದಾರ ಅಂಜುಂ ತಬ್ಬಸ್ಸುಮ್ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ 2 ದಶಕಗಳಿಂದ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭೂಕಂಪನ ಸದ್ದುಗಳು ಕೇಳಿಬರುತ್ತಿವೆ. ಆದರೆ ಕಳೆದ ಅಕ್ಟೋಬರ್ ಮಾಹೆಯಲ್ಲಿ ಗಡಿಕೇಶ್ವಾರ ಗ್ರಾಮದಲ್ಲಿ ನಿರಂತರವಾಗಿ ಕಂಪನಗಳು ಕೇಳಿಬಂದಿದ್ದರಿಂದ ಸಹಜವಾಗಿ ಗ್ರಾಮಸ್ಥರು ಭಯದಲ್ಲಿದ್ದಾರೆ. ಇಲ್ಲಿನ ಜನರ ಭಯ ಹೋಗಲಾಡಿಸಲು ಮತ್ತು ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮ ವಹಿಸಿದೆ. ಭೂಕಂಪನದ ತೀವ್ರತೆ ಅಳೆಯಲು ಹೈದ್ರಾಬಾದಿನ ಭೂ ವಿಜ್ಞಾನಿಗಳು ಇಲ್ಲಿ ಸಿಸ್ಮೋಮೀಟರ್ ಸ್ಥಾಪಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 1 ರಿಂದ 4ರಷ್ಟು ತೀವ್ರತೆ ಇಲ್ಲಿ ದಾಖಲಾಗುತ್ತಿದ್ದರೂ ಕೆಲವೊಂದು ಮನೆಗಳು ಬಿರುಕು ಬಿಟ್ಟರೆ ಹೆಚ್ಚಿನ ಹಾನಿಯಾಗಿಲ್ಲ. ಇದರಿಂದ 20 ಗ್ರಾಮಗಳು ಭಾದಿತವಾಗಿದ್ದು, 5 ಗ್ರಾಮದಲ್ಲಿ ಸಾಮೂಹಿಕ ಶೆಡ್ ನಿರ್ಮಿಸಲಾಗಿದೆ. ಕಾಳಜಿ ಕೇಂದ್ರ ತೆರೆದು ಗ್ರಾಮಸ್ಥರಿಗೆ ಊಟ ಪೂರೈಸಲಾಗುತ್ತಿದೆ. ಈ ಪ್ರದೇಶ ಸುಣ್ಣದ ಕಲ್ಲು ಕೂಡಿದ್ದರಿಂದ ಹೀಗಾಗುತ್ತದೆ. ಇದಕ್ಕೆ ಭಯ ಪಡುವ ಅವಶ್ಯಕತೆವಿಲ್ಲ ಎಂದು ಭೂ ವಿಜ್ಞಾನಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ ಗಡಿಕೇಶ್ವಾರ ಸುತ್ತಮುತ್ತ 60 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ಸದ್ದಿನ ಕಾರಣ ಕಳೆದ 2 ತಿಂಗಳಿಂದ ಇಲ್ಲಿನ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಮನೆ ಮುಂದೆ ಶೆಡ್ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಸರ್ಕಾರ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ ಎಂದರು.
ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಾಗಾರ:
ನವೆಂಬರ್ 11 ರಂದು “ಉದ್ಯಮಿಯಾಗು ಉದ್ಯೋಗ ನೀಡು” ಮತ್ತು “ಕೈಗಾರಿಕಾ ಅದಾಲತ್” ಇ.ಎಸ್.ಐ.ಸಿ. ಆಡಿಟೋರಿಯಂನಲ್ಲಿ ಆಯೋಜಿಸಿದ್ದು, ಇದಕ್ಕೆ ಕೈಗೊಳ್ಳುತ್ತಿರುವ ಪೂರ್ವಸಿದ್ಧತೆ ಬಗ್ಗೆ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕರಾವ ರಘೋಜಿ ಅವರು ವಿವರಿಸಿದರು.
ಸಚಿವ ಮುರುಗೇಶ ನಿರಾಣಿ ಮಾತನಾಡಿ ಅಂದಿನ ಕಾರ್ಯಗಾರಕ್ಕೆ ನೆರೆಯ ಜಿಲ್ಲೆಯ ಇಂಜಿನೀಯರ್ ವಿದ್ಯಾರ್ಥಿಗಳು ಆಗಮಿಸುವಂತೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಾಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಲ್ಲಿ ಮುಂಜಾಗ್ರತವಾಗಿ ಆಡಿಟೋರಿಯಂ ಹೊರಗಡೆ ಕುಳಿತು ವೀಕ್ಷಣೆಗೆ ಸ್ಕ್ರೀನ್ ಅಳವಡಿಸಬೇಕು. ಕಾರ್ಯಾಗಾರಕ್ಕೆ ಬಾರದವರಿಗೆ ಆನ್‍ಲೈನ್ ಮೂಲಕವೆ ಭಾಗವಹಿಸುವ ವ್ಯವಸ್ಥೆಯಾಗಬೇಕು ಜೊತೆಗೆ ಕೈಗಾರಿಕಾ ಅದಾಲತ್ ಯಶಸ್ಸಿಗೆ ಅಗತ್ಯ ಕ್ರಮ ವಹಿಸಬೇಕು ಎಂದರು.