ಮಂಡ್ಯ: ತಾವು ಕೃಷಿ ಕುಟುಂಬದಿಂದ ಬಂದವರು ಎನ್ನುತ್ತಿದ್ದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಗದ್ದೆಗಿಳಿದು ನಾಟಿ ಮಾಡುವ ಮೂಲಕ ತಾವು ರೈತ ಮಹಿಳೆ ಎಂದು ಸಾರಿದರು.
ಮಂಡ್ಯ ಸಮೀಪ ಸಾತನೂರು ಬಳಿ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಗದ್ದೆಯಲ್ಲಿ ನಾಟಿ ಮಾಡಿ ಗಮನ ಸೆಳೆದರು. ರೈತ ಮಹಿಳೆಯರೊಂದಿಗೆ ಭತ್ತದ ನಾಟಿ ಮಾಡಿದ್ದಲ್ಲದೆ, ಗಾಣಕ್ಕೆ ಕಬ್ಬು ಹಾಕುವ ಮೂಲಕ ಗಮನ ಸೆಳೆದರು.
ಇದೇ ವೇಳೆ, ಮಂಡ್ಯದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, 2013-14ರಲ್ಲಿ ಯುಪಿಎ ಸರಕಾರ ಮಂಡಿಸಿದ ಕೃಷಿ ಬಜೆಟ್ ಕೇವಲ 21 ಸಾವಿರ ಕೋಟಿ ರೂಪಾಯಿ ಇತ್ತು. ಆದರೆ, ಮೋದಿ ಅವರು 2020-21ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕೃಷಿ ಅಭಿವೃದ್ಧಿಗಾಗಿ 1.23 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ ಎಂದರು.